ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ನಮಗೆ ಪ್ರತ್ಯೇಕ ಪಡಿತರ ಅಂಗಡಿಯನ್ನು ನೀಡಬೇಕು ಎಂದು ಹಲವು ದಿನಗಳಿಂದ ಇಲ್ಲಿನ ನಿವಾಸಿಗಳು ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿ, ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ಭಾನುವಾರ ಜಿಲ್ಲಾಧಿಕಾರಿ ರಮೇಶ್ ಭೇಟಿ ನೀಡಿ, ಮನವೊಲಿಸಿದ್ದರಿಂದ ಪ್ರತಿಭಟನಾಕಾರರು ಮುಷ್ಕರ ವಾಪಸ್ ಪಡೆದಿದ್ದಾರೆ.
ಗ್ರಾಮದ ಉಪ್ಪಾರ ಸಮುದಾಯದಲ್ಲಿ ಒಟ್ಟು 422 ಕುಟುಂಬಗಳಿಗೆ ಪಡಿತರ ಕಾರ್ಡ್ ಇದೆ. ಈ ಹಿಂದೆ ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪಡಿತರವನ್ನು ವಿತರಣೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ವಿನಾಕಾರಣ ಇದನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಆಹಾರ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಬೇಕು. ಕೂಡಲೇ ನಮಗೆ ಪ್ರತ್ಯೇಕ ನ್ಯಾಯಬೆಲೆ ಅಂಗಡಿ ನೀಡಬೇಕು. ಈಗ ಚುನಾವಣೆಯಾಗಿರುವುದರಿಂದ ನಾವು ಮತದಾನವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಮೇಶ್ ಮಾತನಾಡಿ, ಈಗ ಸಂಚಾರ ಪಡಿತರ ವಿತರಣೆ ವ್ಯವಸ್ಥೆ ಇಲ್ಲ. ಪಡಿತರವನ್ನು ಎಲ್ಲಿ ಬೇಕಾದರೂ ಪಡೆದುಕೊಳ್ಳಬಹುದು. ಇಲ್ಲಿರುವ ಕೆಲವು ಸಮಸ್ಯೆಗಳ ಬಗ್ಗೆ ಉಪ್ಪಾರ ಸಮುದಾಯದ ಮುಖಂಡರು ಲಿಖಿತ ರೂಪದಲ್ಲಿ ದೂರು ನೀಡಿದರೆ, ಇದನ್ನು ಪರಿಶೀಲಿಸಿ ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ. ಮತದಾನ ನಮ್ಮ ಹಕ್ಕಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಎಂದು ಮನವೊಲಿಸಿದರು. ನಂತರ ಇಲ್ಲಿನ ನಿವಾಸಿಗಳು ಮತದಾನ ಬಹಿಷ್ಕಾರ ನಿರ್ಧಾರವನ್ನು ವಾಪಸ್ಸು ಪಡೆಯುವುದಾಗಿ ತಿಳಿಸಿದರು.
ಆಹಾರ ಇಲಾಖೆಯ ಉಪನಿರ್ದೇಶಕ ಯೋಗಾನಂದ, ಆಹಾರ ನಿರೀಕ್ಷಕ ಬಿಸಲಯ್ಯ, ಗ್ರಾಮದ ಮುಖಂಡರಾದ ಪಟೇಲ್ ಮಹೇಶ್, ಚಿಕ್ಕಣ್ಣಶೆಟ್ಟಿ, ಬಿ. ಮಾದೇಶ್, ನಂಜುಂಡಸ್ವಾಮಿ, ಜವರಶೆಟ್ಟಿ, ಬಸವಶೆಟ್ಟಿ, ಶಾಂತರಾಜು, ಮಹೇಶ್, ಸಿದ್ಧರಾಜು, ವೈ.ಕೆ.ಮೋಳೆ ನಾಗರಾಜು ಸೇರಿದಂತೆ ಅನೇಕರು ಇದ್ದರು.