ಮತದಾನ ಬಹಿಷ್ಕಾರ ಮಾಡಿದ್ದ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಚುನಾವಣಾಧಿಕಾರಿಗಳು ಯಶಸ್ಸಿಯಾಗಿದ್ದು, ಅವರೆಲ್ಲರು ಮತದಾನ ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಮೈಸೂರು ತಾಲೂಕಿನ ಏಳಿಗೆ ಹುಂಡಿ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ, ರಸ್ತೆ ಒಳಗೊಂಡಂತೆ ಇನ್ನಿತರ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ, ಮತ ಚಲಾಯಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಮತದಾನದಲ್ಲಿ ಭಾಗಿ ಆಗಿರಲಿಲ್ಲ.
ವಿಷಯ ತಿಳಿದು ತಹಸೀಲ್ದಾರ್ ಆದ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ.ಎನ್.ಗಿರೀಶ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಜತೆಗೆ, ‘ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಬೇಕು. ಆದರೆ, ಮತದಾನ ಬಹಿಷ್ಕಾರ ಮಾಡುವುದು ಸೂಕ್ತವಲ್ಲ’ ಎಂದು ಮತದಾನ ಮಹತ್ವದ ಕುರಿತು ತಿಳಿ ಹೇಳಿದರು. ಇದಕ್ಕೆ ಸ್ಪಂದಿಸಿದ ಗ್ರಾಮಸ್ಥರು, ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮಧಾಹ್ನ 2.30ರ ಹೊತ್ತಿಗೆ 280 ಮತ ಚಲಾವಣೆ ಆಗಿದ್ದವು.