ಬಾಗಲಕೋಟೆ: ೧೮ ವರ್ಷ ವಯೋಮಾನದ ಯುವ ಮತದಾರರು, ಮುಖ್ಯ ವಾಹಿನಿಯಿಂದ ದೂರವಿರುವ ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ಹಿರಿಯನಾಗರಿಕರು, ಮಹಿಳೆಯರು, ಅಲೆಮಾರಿ ಜನಾಂಗದವರು, ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲು ರಚನಾತ್ಮಕ ಕಾರ್ಯ ಚಟುವಟಿಕೆ ಕೈಗೊಳ್ಳಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಹೇಳಿದರು.
ಜಮಖಂಡಿ ತಾಲೂಕಾ ಪಂಚಾಯಿತಿ ಸಭಾ ಭವನದಲ್ಲಿ ಈಚೆಗೆ ಜರುಗಿದ ಸ್ವೀಪ್ ಹಾಗೂ ಇಎಲ್‌ಸಿ ಕಾರ್ಯಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರು ಕಡ್ಡಾಯವಾಗಿ ತಮ್ಮ ಮತದಾರರ ಚೀಟಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಆಧಾರ್ ಇಲ್ಲದಿದ್ದಲ್ಲಿ ಚುನಾವಣಾ ಆಯೋಗವು ಗುರುತಿಸಿದ ಯಾವುದಾದರೂ ಪೂರಕ ದಾಖಲೆಗಳೊಂದಿಗೆ ಆಧಾರ ಜೋಡಣೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಅರಿವು ಮೂಡಿಸಲು ತಿಳಿಸಿದರು.
ಮತದಾನ ಕೇಂದ್ರದಲ್ಲಿ ಇವಿಎಂ ಬಳಕೆ ಮತ್ತು ಚುನಾವಣೆ ಪ್ರಕ್ರಿಯೆಯು ಪಾವಿತ್ರತೆ ಪಾಲನೆ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಹ ನಿರಂತರವಾಗಿ ಸಂಘಟಿಸಬೇಕು. ಸ್ವೀಪ್ ಕಾರ್ಯಕ್ರಮದಡಿ ಸಂಬಂಧಿಸಿದ ಘಟಕಗಳು, ಸಂಚಲನಾ ಸಮಿತಿ ಮತ್ತು ಕಾರ್ಯಪಡೆಗಳು ಅತ್ಯಗತ್ಯವಾಗಿ ಗಮನಿಸಬೇಕಾದ ವಿಷಯಗಳಾದ ಪಟ್ಟಿಯಲ್ಲಿನ ಹೆಸರು, ಸರಿಯಾದ ನಮೂದು, ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮತದಾನದ ದಿನಾಂಕ, ಸಮಯ ಮೊದಲಾದ ವಿವರಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
೨೦೨೩ ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿ, ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಜಿ.ಪಂ. ವ್ಯಾಪ್ತಿಯಲ್ಲಿನ ಎಲ್ಲ ಇಲಾಖೆ ಅಧಿಕಾರಿಗಳು, ಎನ್.ಜಿ.ಒ, ಎನ್‌ಸಿಸಿ, ಎನ್.ಎಸ್.ಎಸ್, ಬ್ಯಾಂಕ್ ಅಧಿಕಾರಿಗಳ ಸೇವೆ ಬಳಸಿಕೊಳ್ಳಬೇಕು. ಸ್ವೀಪ್ ಚಟುವಟಿಕೆ ಭಾಗವಾಗಿ ೨೦೨೩ ರ ಮಾರ್ಚ್ವರೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ, ಈ ಕಾರ್ಯದಲ್ಲಿ ಎಲ್ಲ ಸಂಘ ಸಂಸ್ಥೆಗಳು ಸಹ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮೂಲಕ ಮತದಾರರಲ್ಲಿ ಜಾಗೃತಿ ಹಾಗೂ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಬೇಕು ಎಂದು ಹೇಳಿದರು.
ಜಿ.ಪಂ.ನ ಸ್ವೀಪ್ ನೋಡಲ್ ಅಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕ ಸಿ.ಆರ್. ಮುಂಡರಗಿ ಮಾತನಾಡಿ, ಬಿ.ಎಲ್.ಒಗಳು ಸಹ ಮನೆ ಮನೆಗೆ ಭೇಟಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಮತದಾನದ ಹಕ್ಕು ಚಲಾಯಿಸಲು ಬೇಕಾಗುವ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲಳ್ಳಿ, ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ತಹಸೀಲ್ದಾರ ಸದಾಶಿವ ಮಕ್ಕೋಜಿ ಹಾಗೂ ತಾಲೂಕಿನ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.