ಬಾಗಲಕೋಟೆ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಮತದಾನದ ಜಾಗೃತಿ ಮೂಡಿಸುವ ಸಲುವಾಗಿ ಬಾದಾಮಿ ನಗರದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಬಾದಾಮಿ ತಾಲೂಕಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನವು ಪಿಕಾರ್ಡ ಬ್ಯಾಂಕ್ ಆವರಣದಿಂದ ಪ್ರಾರಂಭವಾಗಿ ನಾನಾ ಕಡೆ ಸಂಚರಿಸಿ ಮುಖ್ಯ ರಸ್ತೆಯ ಮೂಲಕ ತಾಲೂಕಾ ಪಂಚಾಯತ ಕಾರ್ಯಾಲಯಕ್ಕೆ ಮುಕ್ತಾಯಗೊಂಡಿತು.
ಜಾಥಾದಲ್ಲಿ ಪುರಸಭೆ ಪೌರಕಾರ್ಮಿಕರು ಮತದಾನ ಜಾಗೃತಿಯ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಜಾಥಾದೂದ್ದಕ್ಕು ಘೋಷಣೆಗಳನ್ನು ಕೂಗಿದರು. ಸ್ವಚ್ಛ ವಾಹಿನಿಗಳಲ್ಲಿ ಧ್ವನಿವರ್ಧಕದ ಮೂಲಕ ಮತದಾನದ ಮಹತ್ವವನ್ನು ಸಾರಲಾಯಿತು.
ತಾಲೂಕಾ ಪಂಚಾಯತ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ನೆರೆದ ಜನರ ಗಮನ ಸೆಳೆಯಲಾಯಿತು. ಜಾನಪದ ಕಲಾವಿದರು ಮತದಾನ ಜಾಗೃತಿ ಕುರಿತು ಕಲಾತಂಡಗಳಿಂದ ನೃತ್ಯ ಹಾಗೂ ಬೀದಿನಾಟಕ ಜರುಗಿತು.
ಪ್ರಾರಂಭದಲ್ಲಿ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಾಥಾದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಸಹಾಯಕ ಚುನಾವಣಾಧಿಕಾರಿ ಡಾ.ದುರ್ಗೇಶ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಜಿ.ಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ತಹಶೀಲ್ದಾರ ಜೆ.ಬಿ.ಮಜ್ಜಗಿ ತಾ.ಪಂ.ಇಒ ಮಲ್ಲಿಕಾರ್ಜುನ ಬಡಿಗೇರ, ಮುಖ್ಯಾಧಿಕಾರಿ ಡಿ.ಸುಧಾಕರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.