ಮೈಸೂರು: ಪ್ರತಿ ಮತದಾರ ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
ಜಿಲ್ಲಾ ಪಂಚಾಯಿತಿ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಮಟ್ಟದ ತರಬೇತುದಾರರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಾಲೂಕು ಮಟ್ಟದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಶಾಲಾ ಮಟ್ಟದಲ್ಲಿ ಚುನಾವಣೆ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ಚುನಾವಣಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಮತದಾನದಲ್ಲಿ ಸಕ್ರಿಯವಾಗಿ ಎಲ್ಲರೂ ಪಾಲ್ಗೊಳುವಂತೆ ಮಾಡಬೇಕು ಎಂಬುದು ಉದ್ದೇಶವಾಗಿದೆ. ಎಲ್ಲರೂ ಮತದಾನ ಮಾಡುವಂತೆ ತಿಳಿಸಬೇಕು ಎಂದು ಹೇಳಿದರು.
ಚುನಾವಣೆ ಬೇಸಿಗೆ ಸಮಯದಲ್ಲಿ ನಡೆಯುತ್ತಿದೆ. ಯಾರೊಬ್ಬರೂ ಮತದಾನ ಮಾಡುವಲ್ಲಿ ಅಸಡ್ಡೆ ಮಾಡಬಾರದು. ನನ್ನ ಒಂದು ಮತದಾನದಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಮನೋಭಾವ ಇಟ್ಟುಕೊಳ್ಳಬಾರದು. ಪ್ರತಿಯೊಂದು ಮತವು ಅಮೂಲ್ಯವಾದದ್ದು ಎಂದರು.
18 ವರ್ಷ ಮೇಲ್ಪಟ್ಟ ಮತದಾರರು, ವಯಸ್ಕ ಪಾಲಕರು, ಪೌರಕಾರ್ಮಿಕರಲ್ಲಿಯೂ ಅರಿವನ್ನು ಮೂಡಿಸಿ ಮತದಾನ ಮಾಡಿಸಬೇಕು. ನಗರ ಪ್ರದೇಶ, ಗ್ರಾಮೀಣ ವಿಭಾಗ ಹಾಗೂ ಬುಡಕಟ್ಟು ಜನಾಂಗಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ಕಳೆದ ಚುನಾವಣೆಯಲ್ಲಿ ಆಗಿದೆ. ಈ ಬಾರಿ ಪ್ರತಿಯೊಂದು ಪ್ರದೇಶಗಳಿಂದಲೂ ಹೆಚ್ಚಿನ ಮತದಾನ ಮಾಡಿಸಬೇಕು. ನಗರ ಪ್ರದೇಶ ಮತ್ತು ಬುಡಕಟ್ಟು ಜನಾಂಗಗಳಲ್ಲಿ ಮತದಾನದ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಹಿರಿಯರು ಮತ್ತು ಅಂಗವಿಕಲರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಂಡು ಬಂದಲ್ಲಿ ಗಮನಕ್ಕೆ ತರಬೇಕು. ಚುನಾವಣಾ ಗೀತೆಗಳನ್ನು ಶಾಲೆ, ಕಾಲೇಜುಗಳಲ್ಲಿ ಹಾಡಿಸುವುದು, ಚುನಾವಣಾ ಸಂಬಂಧಿತ ನೃತ್ಯ ಸಂಯೋಜನೆ ಮಾಡಿ ಗ್ರಾಮೀಣ ಭಾಗಗಳಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಕಾಲೇಜು ಹಂತದಲ್ಲಿ ಮತದಾರರ ಸಾಕ್ಷರತಾ ಸಂಘ ಸ್ಥಾಪಿಸಿ ಅರಿವು ಮೂಡಿಸಲಾಗುತ್ತಿದೆ. ಆನ್‌ಲೈನ್‌ನಲ್ಲೂ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದರು.
ಜಿಪಂ ಸಹಾಯಕ ನಿರ್ದೇಶಕ ವಿಶ್ವನಾಥ್, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಮತ್ತು ಡಯಟ್ ಪ್ರಾಂಶುಪಾಲ ನಾಗರಾಜಯ್ಯ, ಮಾಸ್ಟರ್ ತರಬೇತಿದಾರ ಮಹದೇವಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.