ಜಿಲ್ಲೆ

ಮತಗಟ್ಟೆಯಲ್ಲಿಲ್ಲ ಮೊಬೈಲ್ ಬಳಕೆಗೆ ಅವಕಾಶ

ಬೀದರ್: ಆರ್. ಒ ಮತ್ತು ಎಆರ್.ಒಗಳಿಗೆ ಹೊರತುಪಡಿಸಿ ಮತದಾನ ಕೇಂದ್ರದ ಒಳಗಡೆ ಯಾರೂ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರಡ್ಡಿ ಹೇಳಿದರು.

ವಿಧಾನಸಭೆ ಚುನಾವಣೆ ನಿಮಿತ್ತ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸೋಮವಾರ ಆರ್ ಒ, ಎಆರ್.ಒ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಎಲ್ಲ ಅಧಿಕಾರಿಗಳು ಚುನಾವಣೆ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.

ಚುನಾವಣೆ ಸುಸೂತ್ರ ನಡೆಯಬೇಕಾದರೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್ ಕಾರ್ಯನಿರ್ವಹಣೆಯ ವಿಧಾನಗಳನ್ನು ಅಧಿಕಾರಿಗಳು ಅರಿಯಬೇಕು. ಮತಯಂತ್ರ ಜೋಡಣೆ, ಮಾಕ್ ಪೋಲ್, ಸೀಲಿಂಗ್, ಇವಿಎಂನ ಎಲ್ಲ ಹಂತಗಳನ್ನು ತಿಳಿದುಕೊಳ್ಳಬೇಕು. ಮೇ 10ರಂದು ಬೆಳಗ್ಗೆ 5.30ಕ್ಕೆ ಅಧಿಕಾರಿಗಳು ಮತಗಟ್ಟೆ ಒಳಗೆ ಹಾಜರಿರಬೇಕು. 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತಕೇಂದ್ರದ 100 ಮೀಟರ್ ಒಳಗಡೆ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದರು.

ಅಂಗವಿಕಲರು, ವಯಸ್ಕರು, ಮತದಾನ ಮಾಡಲು ಆಗದ ದುರ್ಬಲರು ತಮ್ಮ ಜತೆ ಒಬ್ಬರನ್ನು ಕರೆತರಲು ಅವಕಾಶವಿದೆ. ಅವರು 18 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಹೇಳಿದರು. ಬೀದರ್, ಬಸವಕಲ್ಯಾಣ ಸಹಾಯಕ ಆಯುಕ್ತರು ಇತರರಿದ್ದರು.