ಧಾರವಾಡ: ಮತದಾರನಿಗೆ ಮತದಾನದ ರೀತಿ, ಸಮಯ, ಸ್ಥಳದ ಮಾಹಿತಿಯನ್ನು ನೀಡಲು ಮತ್ತು ಭಾರತ ಚುನಾವಣಾ ಆಯೋಗದ ಅನುಮತಿ ಪಡೆದು ಇದೇ ಮೊದಲ ಬಾರಿಗೆ ಮತಗಟ್ಟೆ ತಲುಪಲು ರೂಟ್ವ್ಯಾಪ್ ಅನ್ನು ನೀಡಲು ತಂತ್ರಾಂಶ ಬಳಸಲು ಉದ್ದೇಶಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಕರೆದಿದ್ದ ರಾಜಕೀಯ ಪಕ್ಷದ ಪ್ರತಿನಿಧಿಗಳ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮತದಾರರ ಪಟ್ಟಿಯಲ್ಲಿ ಹೆಸರು, ಮತಗಟ್ಟೆ ವಿವರ ಪಡೆಯಲು ಮತದಾರ 1077ಗೆ ಕರೆ ಮಾಡಿದರೆ ಕೂಡಲೆ ಮಾಹಿತಿ ನೀಡಲಾಗುವುದು ಎಂದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮ ತಡೆಯಲು ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ತಲಾ 3 ಫ್ಲೆ ೖಯಿಂಗ್ ಸ್ಕಾ್ವಡ್ ರಚಿಸಲಾಗಿದೆ. ನಿಯಮ ಉಲ್ಲಂಘನೆ ದೂರು ದಾಖಲಿಸಲು ಸಾರ್ವಜನಿಕರು ಮಾಹಿತಿ ನೀಡಲು 1077 ಸಹಾಯವಾಣಿ ಸ್ಥಾಪಿಸಲಾಗಿದೆ. ದೂರುಗಳಿದ್ದರೆ ಎಂಸಿಸಿ ಕಮಿಟಿಯ ಅಧ್ಯಕ್ಷೆ ಹಾಗೂ ಜಿ.ಪಂ. ಸಿಇಒ ಡಾ. ಬಿ. ಸುಶೀಲಾ ಅವರ ಮೊ: 9480864000 ಮತ್ತು ಧಾರವಾಡ ಉಪ ವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಮೊ: 9731008189 ಅವರಿಗೆ ಮಾಹಿತಿ ನೀಡಬಹುದು. ಮಾಹಿತಿದಾರರು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನೀಡಬೇಕು ಎಂದರು.
4 ದೂರು ದಾಖಲು: ನೀತಿ ಸಂಹಿತೆ ಉಲ್ಲಂಘನೆ ಕುರಿತು 4 ದೂರುಗಳು ದಾಖಲಾಗಿವೆ. ಕುಬೇರಪ್ಪ, ಶ್ರೀನಿವಾಸ ಮಾನೆ ಎಂಬುವರ ವಿರುದ್ಧ ಅನುಮತಿ ಸಿಗುವ ಮೊದಲೇ ಪ್ರಚಾರ ನಡೆಸಿದ ಪ್ರತ್ಯೇಕ 2 ದೂರು ದಾಖಲಾಗಿವೆ. ಆಯೋಗಕ್ಕೆ ವರದಿ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಸಚಿವ ಜಗದೀಶ ಶೆಟ್ಟರ್ ಸಂಹಿತೆ ಉಲ್ಲಂಘಿಸಿದ್ದಾರೆಂದು ದೂರು ಬಂದಿತ್ತು. ಪರಿಶೀಲಿಸಲಾಗಿ, ಉಲ್ಲಂಘನೆಯಾಗಿಲ್ಲ ಎಂದು ತಿಳಿದುಬಂದಿದೆ. ರವಿ ಪಡಸಲಗಿ ಎಂಬುವರು ಸೂಚಕರ ಖೊಟ್ಟಿ ಸಹಿ ಮಾಡಿದ ದೂರು ಬಂದ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಬಿಸ್ವಾಸ್ ತಿಳಿಸಿದರು. ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಡಾ. ಬಿ. ಸುಶೀಲಾ, ಉಪ ವಿಭಾಗಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಉಪಸ್ಥಿತರಿದ್ದರು.
75,774 ಮತದಾರರು: ಧಾರವಾಡ ಜಿಲ್ಲೆಯಲ್ಲಿ 13,989 ಪುರುಷ, 8,653 ಮಹಿಳೆ, 4 ಇತರೆ ಸೇರಿ 22,646 ಮತದಾರರಿದ್ದಾರೆ. ಗದಗ ಜಿಲ್ಲೆಯಲ್ಲಿ 11,001 ಪುರುಷ, 5,011 ಮಹಿಳೆ, 1 ಇತರೆ ಸೇರಿ 16,013; ಹಾವೇರಿ ಜಿಲ್ಲೆಯಲ್ಲಿ 16,430 ಪುರುಷ, 7,453 ಮಹಿಳೆ, 5 ಇತರೆ ಸೇರಿ 23,888 , ಉತ್ತರ ಕನ್ನಡ ಜಿಲ್ಲೆಯಲ್ಲಿ 7,160 ಪುರುಷ, 6,066 ಮಹಿಳೆ 1 ಇತರೆ ಸೇರಿ 13,227 ಮತದಾರರಿದ್ದಾರೆ. ಒಟ್ಟು 48,580 ಪುರುಷ, 27,183 ಮಹಿಳೆ, 11 ಇತರೆ ಸೇರಿ ಒಟ್ಟು 75,774 ಅರ್ಹ ಮತದಾರರಿದ್ದಾರೆ.
ಕೋವಿಡ್ ತಡೆಗೆ ಮಾರ್ಗಸೂಚಿ: ಕೋವಿಡ್- 19 ಮಾರ್ಗಸೂಚಿ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಪ್ರಚಾರ ವಾಹನಗಳ ಬಳಕೆಗೆ ಪ್ರತ್ಯೇಕ ನಿಯಮಗಳಿದ್ದು, ಅನುಮತಿ ಪಡೆದ ವಾಹನದಲ್ಲಿ ಅನುಮತಿ ಪತ್ರದ ಮೂಲಪ್ರತಿಯನ್ನು ಲಗತ್ತಿಸಬೇಕು. ವಾಹನ ಸಾಮರ್ಥ್ಯದ ಅರ್ಧದಷ್ಟು ಜನ ಮಾತ್ರ ಸಂಚರಿಸಬೇಕು. ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು ಎಂದು ಚುನಾವಣೆ ಅಧಿಕಾರಿ ಬಿಸ್ವಾಸ್ ಎಚ್ಚರಿಕೆ ನೀಡಿದರು.