ಜಿಲ್ಲೆ

ಮತ ಎಣಿಕೆಗೆ ಜಿಲ್ಲಾಡಳಿತ ಸಿದ್ದ

ಬಳ್ಳಾರಿ : ಜಿಲ್ಲೆಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಜೂ. 04 ರಂದು ಇಲ್ಲಿನ ಆರ್‌ವೈಎಂಸಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಡಿಸಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿ ಮಾತನಾಡಿದರು. ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆ ಕೇಂದ್ರದ ಕಟ್ಟಡದಲ್ಲಿ 20 ಇವಿಎಂ ಭದ್ರತ ಕೊಠಡಿ ಮತ್ತು 2 ಅಂಚೆ ಮತಗಳ ಸ್ಟ್ರಾಂಗ್ ರೂಂಗಳಿದ್ದು, ಮತ ಎಣಿಕೆ ಕಾರ್ಯ ಒಟ್ಟು ಎಂಟು ಹಾಲ್‌ನಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರಕ್ಕೆ ತಲಾ 14 ಟೇಬಲ್ಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಟೇಬಲ್ಗೆ ತಲಾ ಒಬ್ಬರಂತೆ ಎಣಿಕಾ ಮೇಲ್ವಿಚಾರಕ, ಎಣಿಕಾ ಸಹಾಯಕ, ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಒಟ್ಟು 112 ಟೇಬಲ್ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಹಡಗಲಿ 218 ಮತಗಟ್ಟೆಗಳಿದ್ದು, 16 ಸುತ್ತು , ಹಗರಿಬೊಮ್ಮನಹಳ್ಳಿ 254 ಮತಗಟ್ಟೆಗಳಿದ್ದು 19 ಸುತ್ತು, ವಿಜಯನಗರ 259 ಮತಗಟ್ಟೆಗಳಿದ್ದು 19 ಸುತ್ತು , ಕಂಪ್ಲಿ 242 ಮತಗಟ್ಟೆಗಳಿದ್ದು 18 ಸುತ್ತು , ಬಳ್ಳಾರಿ ಗ್ರಾಮೀಣ 235 ಮತಗಟ್ಟೆಗಳಿದ್ದು 17 ಸುತ್ತು, ಬಳ್ಳಾರಿ ನಗರ 261 ಮತಗಟ್ಟೆಗಳಿದ್ದು, 19 ಸುತ್ತು, ಸಂಡೂರು 253 ಮತಗಟ್ಟೆಗಳಿದ್ದು 19 ಸುತ್ತು , ಕೂಡ್ಲಿಗಿ 250 ಮತಗಟ್ಟೆಗಳಿದ್ದು 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಬಂದೂಬಸ್ತ್ : ಮತ ಎಣಿಕೆಯ ಕೇಂದ್ರದ ಸುತ್ತಲೂ ಒಬ್ಬ ಎಸ್ಪಿ, ಇಬ್ಬರು ಎಎಸ್ಪಿ, ಐವರು ಡಿವೈಎಸ್ಪಿ, ಹದಿನೈದು ಸಿಪಿಐ, 25 ಪಿಎಸ್‌ಐ, 40 ಎಎಸ್‌ಐ, 250 ಪಿಸಿ, ಕೆಎಸ್‌ಆರ್‌ಪಿ, ಡಿಆರ್ ತಲಾ ನಾಲ್ಕು ವಾಹನ ನಿಯೋಜಿಸಲಾಗುವುದು ಎಂದರು.