ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಜೂನ್ 4 ರ ಬೆಳಗ್ಗೆ 7ಕ್ಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡದಲ್ಲಿ ಆರಂಭಗೊಳ್ಳಲಿದ್ದು, ಈ ಕಾರ್ಯ ಸುಗಮವಾಗಿ ನಡೆಸಲು ಅಭ್ಯರ್ಥಿಗಳ ಏಜೆಂಟರು ಶಿಸ್ತು ಮತ್ತು ತಾಳ್ಮೆಯಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಮತಎಣಿಕೆ ಕುರಿತು ರಾಜಕೀಯ ಪಕ್ಷದ ಅಭ್ಯರ್ಥಿಗಳು/ಏಜೆಂಟರ್‌ಗಳಿಗೆ ಡಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತಎಣಿಕೆ ನಡೆಯಲಿದೆ. ಉಮೇದುವಾರರು ಎಣಿಕೆಗೆ 125 ಏಜೆಂಟರನ್ನು ನೇಮಿಸಲು ಅವಕಾಶವಿದೆ. ನಮೂನೆ-18ರಲ್ಲಿ ಪ್ರತಿನಿಧಿಗಳ ಹೆಸರು, ವಿಳಾಸ ಮತ್ತು ಈಚಿನ 2 ಭಾವಚಿತ್ರಗಳನ್ನು ನೀಡಿ, ಗುರುತಿನ ಚೀಟಿ ಪಡೆದುಕೊಳ್ಳಬಹುದು. ಪ್ರತಿ ತಾಲೂಕು ಮತಎಣಿಕೆ ಏಜೆಂಟರಿಗೆ ವಿವಿಧ ಬಣ್ಣದ ಗುರುತಿನ ಚೀಟಿ ವಿತರಿಸಲಾಗುವುದು ಎಂದರು.
ಎಣಿಕೆ ದಿನದಂದು ಗುರುತಿನ ಚೀಟಿ ತೋರಿಸಿ ಕೇಂದ್ರಕ್ಕೆ ಸಕಾಲಕ್ಕೆ ಪ್ರವೇಶ ಪಡೆಯಬೇಕು. ಪೆನ್ನು ಮತ್ತು ಬಿಳಿ ಹಾಳೆ ಹೊರತಾಗಿ ಮೊಬೈಲ್, ವಿದ್ಯುನ್ಮಾನ ಯಂತ್ರಗಳು, ನೀರಿನ ಬಾಟಲಿ ಮತ್ತಿತರ ಯಾವುದೇ ರೀತಿಯ ವಸ್ತುಗಳನ್ನು ಕೇಂದ್ರಕ್ಕೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿದ ಕೌಂಟಿಂಗ್ ಕೊಠಡಿ ಹೊರತುಪಡಿಸಿ ಬೇರೆ ಕಡೆಗೆ ಹೋಗುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸಿದವರನ್ನು ಹೊರಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. ಅಂದು ಬೆಳಗ್ಗೆ 7.30 ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆಯಲಾಗುವುದು. ಬೆಳಗ್ಗೆ 8ಕ್ಕೆ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ಆರಂಭಿಸಲಾಗುವುದು. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ, ಪಾವಗಡ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು, ಶಿರಾ, 2ನೇ ಮಹಡಿಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಚಳ್ಳಕೆರೆ 260-19, ಚಿತ್ರದುರ್ಗ 288 -21, ಹಿರಿಯೂರು 287-21, ಹೊಸದುರ್ಗ-242-18, ಹೊಳಲ್ಕೆರೆ-299-22, ಶಿರಾ 267-20, ಪಾವಗಡ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳ ಎಣಿಕೆಯು 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ. ತ್ವರಿತಗತಿ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತರಬೇತುದಾರ ಎಸ್.ನಾಗಭೂಷಣ್, ಜಿಲ್ಲಾ ಯೋಜನಾ ನಿರ್ದೇಶಕ ಎಂ.ಮಹೇಂದ್ರಕುಮಾರ್ ಹಾಗೂ ಉಮೇದುವಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.
*ಕೋಟ್
ಎಣಿಕೆ ಕೇಂದ್ರದಲ್ಲಿ ಅನವಶ್ಯಕ ಚರ್ಚೆ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುವುದು, ಎಲ್ಲೆಂದರಲ್ಲಿ ಸುತ್ತಾಡುವುದು, ಗುಂಪು ಚರ್ಚೆಗಳಿಗೆ ಅವಕಾಶವಿರುವುದಿಲ್ಲ. ಏಜೆಂಟರು ಕೊಠಡಿ ಬಿಟ್ಟು ಕೇಂದ್ರದಲ್ಲಿ ಸುತ್ತಾಡುವಂತಿಲ್ಲ. ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಧರ್ಮೇಂದರ್‌ಕುಮಾರ್ ಮೀನಾ, ಎಸ್‌ಪಿ