ಜಿಲ್ಲೆ

ಮಣ್ಣು ಹೋಯ್ತು ಹಣ ಬರಲಿಲ್ಲ

ರಮೇಶ ಮೇಳಕುಂದಾ

ಕಲಬುರಗಿ: ಭಾರತ ಮಾಲಾ ಯೋಜನೆ ಅಡಿ ನಿರ್ಮಾಣವಾಗುತ್ತಿರುವ ಚತುಷ್ಪಥ ಹೆದ್ದಾರಿಗೆ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದ ರೈತ ಮಹಿಳೆ ಚಂದವ್ವ ಅವರ ಜಮೀನಿನಿಂದ ಮುರುಮ್ ಪಡೆದಿದ್ದು, ಅದರ ಹಣ ನೀಡದೆ ಸತಾಯಿಸಲಾಗುತ್ತಿದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಆರೋಪಿಸಿದರು.

ಬಿಡಿ ಗುತ್ತಿಗೆದಾರ ಮಾಲ್ಡಿವ್ ಇನ್‌ಫ್ರಾ ಕಂಪನಿಯವರು ಮುರುಮ್ ಸಾಗಿಸಲು ಕರಾರು ಪತ್ರ ಬರೆಸಿಕೊಂಡು ಪ್ರತಿ ಎಕರೆಗೆ ಒಂದು ಮೀಟರ್‌ಗೆ ೧.೪೦ ಲಕ್ಷ ರೂ. ನಿಗದಿ ಮಾಡಲಾಗಿದೆ. ಒಟ್ಟು ನಾಲ್ಕು ಎಕರೆಯಲ್ಲಿ ೨.೫ ಮೀಟರ್ ಮುರುಮ್ ಸಾಗಿದ್ದು, ಒಟ್ಟು ೧೪ ಲಕ್ಷ ರೂ. ನೀಡಬೇಕಿದ್ದು, ಒಂದು ವರ್ಷದಿಂದ ನೀಡುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ಕರಾರು ಪತ್ರದ ಪ್ರಕಾರ ಗಣಿ ಅನುಮತಿ, ರಾಜಧನ ಎಲ್ಲವನ್ನು ಮಾಲ್ಡಿವ್ ಇನಫ್ರಾ ಕಂಪನಿಯವರು ನೋಡಿಕೊಳ್ಳಬೇಕು. ಆದರೆ ಗಣಿ ಇಲಾಖೆಗೆ ರಾಜಧನ ನೀಡಿಲ್ಲ. ಈ ಮಧ್ಯೆ ಗಣಿ ಇಲಾಖೆಯವರು ನಿಯಮ ಮೀರಿ ಗಣಿಗಾರಿಕೆ ಮಾಡಿದ್ದು, ರಾಜಧನ, ದಂಡ ಸೇರಿ ೩೯ ಲಕ್ಷ ರೂ. ನೀಡಬೇಕು ಎಂದು ರೈತ ಮಹಿಳೆಗೆ ನೋಟಿಸ್ ನೀಡಿದೆ ಎಂದು ಹೇಳಿದರು.

ಬಾಕಿ ೧೪ ಲಕ್ಷ ರೂ. ನೀಡಬೇಕು ಎಂದು ಹಲವು ಬಾರಿ ಕಂಪನಿ ಬಳಿ ಹೋದರೂ ಯಾರೂ ಕೇಳುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವರ್ಷದಿಂದ ಅಲೆದಾಡುತ್ತಿದ್ದು, ಇತ್ತ ಜಮೀನಿನಲ್ಲಿ ಬೆಳೆ ಬೆಳೆಯಲೂ ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಹಣವೂ ಬಾರದೆ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮುರುಮ್ ಸಾಗಿಸಿದ ಹಣ ಕೊಡಿಸಬೇಕು ಎಂದು ರೈತ ಮಹಿಳೆ ಚಂದವ್ವ ಆಗ್ರಹಿಸಿದರು.

ವಿಜಯಕುಮಾರ ದೇಸಾಯಿ, ಚಂದ್ರಕಾAತ ಕಿರಸಾವಳಗಿ, ರವಿ ಡೊಂಗರಗಾAವ, ಶಾಂತು ಚಕ್ರ ಇತರರಿದ್ದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಬ್ಬಾಳಿಕೆ

ಬಂದರವಾಡ ಗ್ರಾಮದ ಜಮೀನಿನಲ್ಲಿ ರೈತ ಮಹಿಳೆ ಚಂದವ್ವ ಅವರ ೭.೧೩ ಎಕರೆ ಜಮೀನಿನಲ್ಲಿ ಕರಾರು ಪತ್ರ ಬರೆಸಿಕೊಂಡು ನಾಲ್ಕು ಎಕರೆಯಲ್ಲಿ ಮುರುಮ್ ಸಾಗಿಸಲಾಗಿದೆ. ಪ್ರಸ್ತುತ ಇದುವರೆಗೆ ಸಾಗಿಸಿದ ಮುರುಮ್ ದರ ೧೪ ಲಕ್ಷ ರೂ. ಆಗುತ್ತದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಬೇಕಾಬಿಟ್ಟಿಯಾಗಿ ೩೯ ಲಕ್ಷ ರೂ. ದಂಡ, ರಾಜಧನ ಕಟ್ಟಬೇಕು ಎಂದು ನೋಟಿಸ್ ನೀಡಿದೆ. ೧೪ ಲಕ್ಷ ಮುರುಮ್‌ಗೆ ೩೯ ಲಕ್ಷ ರೂ. ರಾಜಧನ, ದಂಡ ಕಟ್ಟಬೇಕೇ?. ನಮ್ಮ ಹೊಲವೇ ಹೋಗುವ ಭೀತಿ ಎದುರಾಗಿದೆ. ಹೊಲ ಹಣ ಕೊಡಿಸಿ ಎಂದು ಚಂದವ್ವ ಪತಿ ಬಾಬು ಆಗ್ರಹಿಸಿದರು.