ಜಿಲ್ಲೆ

ಮಣ್ಣು ಹಾಕಿ ರಸ್ತೆ ದುರಸ್ತಿಪಡಿಸಿದ ಗ್ರಾಮಸ್ಥರು

ಹೊಳೆನರಸೀಪುರ: ತಾಲೂಕಿನ ಚಿಕ್ಕಚಾಗಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ ರಸ್ತೆ ಗುಂಡಿ ಮುಚ್ಚದ ಕಾರಣ ಗ್ರಾಮಸ್ಥರೇ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿ ತಾತ್ಕಾಲಿಕವಾಗಿ ದುರಸ್ತಿಪಡಿಸಿದ್ದಾರೆ.

ಹಲವು ವರ್ಷಗಳಿಂದ ಮನವಿ ಸಲ್ಲಿಸಿ ರೋಸಿಹೋಗಿದ್ದ ಗ್ರಾಮಸ್ತರು ತಮ್ಮ ಗ್ರಾಮಕ್ಕೆ ತೆರಳುವ ಗುಂಡಿ ಬಿದ್ದ ರಸ್ತೆಗೆ ಮಣ್ಣು ಹಾಕಿದರು. ಟ್ರಾೃಕ್ಟರ್‌ನಲ್ಲಿ ಮಣ್ಣು ತುಂಬಿಕೊಂಡು ಗುದ್ದಲಿ ಹಿಡಿದು ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ.

ಸುಮಾರು 200 ಮನೆಗಳಿರುವ ಚಿಕ್ಕಚಾಗಹಳ್ಳಿ ಗ್ರಾಮ ಪಟ್ಟಣದಿಂದ ಕೇವಲ 3 ಕಿ.ಮೀ.ದೂರದಲ್ಲಿದೆ. ಮೂರು ಗುಚ್ಛ ಮನೆಗಳಿದ್ದು, ನಡುವೆ ಹೊಲ, ಗದ್ದೆ, ತೋಟಗಳಿವೆ. ಹೊನ್ನಾವರ, ಕೊಂಗಲಬೀಡು ಹಾಗೂ ಹರಳಹಳ್ಳಿ ಗ್ರಾಮಗಳಿಗೆ ತೆರಳಲು ಚಿಕ್ಕಚಾಗಹಳ್ಳಿ ರಸ್ತೆ ಮಾರ್ಗವನ್ನೇ ಅನುಸರಿಸಬೇಕಿದೆ. ಆದರೆ ಬಹುಮುಖ್ಯವಾಗಿ ಗ್ರಾಮದ ರಸ್ತೆ ಕಳೆದ 2 ದಶಕಗಳಿಂದ ಡಾಂಬರೀಕರಣವಾಗಿಲ್ಲ. ಹಾಗಾಗಿ ಮಾರುದ್ದಕೊಂದು, ಮೊಣಕಾಲು ಮಟ್ಟದ ಗುಂಡಿ ಬಿದ್ದಿತ್ತು. ಬಹುತೇಕ ಬೈಕ್‌ಗಳಲ್ಲೇ ಗ್ರಾಮದಿಂದ ಪಟ್ಟಣದ ಕಡೆಗೆ ಓಡಾಟ ನಡೆಸುವವರಿದ್ದಾರೆ. ಬೈಕ್ ಚಕ್ರ ರಸ್ತೆಯಲ್ಲಿನ ಗುಂಡಿಗಿಳಿದು ಬಿದ್ದ ನಿದರ್ಶನಗಳು ಹಲವಿವೆ.

ತುರ್ತು ಸಂದರ್ಭಗಳಲ್ಲಿ ಈ ಗ್ರಾಮಗಳಿಗೆ ತೆರಳಲು ಆಟೋ ಚಾಲಕರು ನಿರಾಕರಿಸುತ್ತಿದ್ದರು. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ಹರಸಾಹಸ ಪಡುವಂತಾಗಿತ್ತು. ಅಶಕ್ತರು, ಗರ್ಭಿಣಿಯರ ಸಂಚಾರ ಕಷ್ಟ ಸಾಧ್ಯವಾಗಿತ್ತು. ಶಾಸಕ, ಸಂಸದರ ಬಳಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಎನ್ನುವುದು ಗ್ರಾಮದ ಯುವಕ ಕೇಶವ್ ಆರೋಪವಾಗಿದೆ.

ರಸ್ತೆ ಸರಿಪಡಿಸಲು ಅಲೆದಾಟ ವ್ಯರ್ಥ ಎಂದೆಣಿಸಿದ ಗ್ರಾಮಸ್ಥರೇ ತಮ್ಮ ಗ್ರಾಮದ ರಸ್ತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಸಂಕಲ್ಪ ಮಾಡಬೇಕಾಯಿತು ಎಂದಿದ್ದಾರೆ. ಈಗಾದರೂ ರಸ್ತೆ ಡಾಂಬರೀಕರಣಗೊಳಿಸಿ ಸಂಚಾರ ಸುಗಮಗೊಳಿಸುವರೇ ಎನ್ನುವ ನಿರೀಕ್ಷೆ ಈ ಭಾಗದ ಗ್ರಾಮಸ್ಥರಲ್ಲಿದೆ.