ಹಾಸನ : ಕೃಷಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆ ನಡೆಸಿ ಅವರಿಗೆ ಮಣ್ಣು ಪರೀಕ್ಷೆ ವರದಿ (ಸಾಯಿಲ್ ಕಾರ್ಡ್) ವಿತರಣೆಯಲ್ಲಿ ಲೋಪ ಕಂಡು ಬಂದಿದೆ. ಹೀಗಾಗಿ ಮಾಚ್ 21ರ ಮಂಗಳವಾರ ನಗರದ ಕೃಷಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ವೀರಭದ್ರಪ್ಪ ತಿಳಿಸಿದರು.
ಹಿರಿಯ ನಾಗರಿಕ ವೇದಿಕೆ, ವಕೀಲರ ಸಂಘ, ಪತ್ರಕರ್ತರ ಸಂಘ ಸೇರಿದಂತೆ ಹಲವು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಸುಮಾರು 500 ರೈತರೊಂದಿಗೆ ಸಂತೆಪೇಟೆಯಲ್ಲಿರುವ ಕೃಷಿ ಅಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಸರಿಯಾದ ಮಾಹಿತಿ ನೀಡುವಂತೆ ಒತ್ತಾಯಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಪ್ರತಿ ಗ್ರಾಮಗಳಲ್ಲಿ ಮಣ್ಣು ಪರೀಕ್ಷೆ ನಡೆಸಿ ಅವರಿಗೆ ಕಾರ್ಡ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಕೃಷಿ ಇಲಾಖೆಯಲ್ಲಿ ಹಣದ ಆಸೆಯಿಂದ ಅಧಿಕಾರಿಗಳು ಯಾವ ಗ್ರಾಮಗಳಿಗೂ ಭೇಟಿ ನೀಡದೆ ಸುಳ್ಳು ಪ್ರಮಾಣಪತ್ರ ನೀಡುತ್ತಿದ್ದಾರೆ ಎಂದು ದೂರಿದರು.
ಈ ಕಾರ್ಡ್ ವಿತರಣೆಯಲ್ಲಿ ಲೋಪ ಆಗಿರುವ ಬಗ್ಗೆ ಕೃಷಿ ಇಲಾಖೆಯಲ್ಲಿ ಮಾಹಿತಿ ಕೇಳಿದರು ಸರಿಯಾದ ಮಾಹಿತಿಯನ್ನು ಇದುವರೆಗೂ ನೀಡಿಲ್ಲ. ಆದ್ದರಿಂದ ಇಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸುಳ್ಳು ಪ್ರಮಾಣಪತ್ರ ನೀಡಿರುವ ರೈತರೊಂದಿಗೆ ಪ್ರತಿಭಟನೆ ನಡೆಸುವುದಲ್ಲದೆ ಸಹಿ ಸಂಗ್ರಹಿಸಿ ಅದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುವುದು. ನಂತರ ಒಂದು ತಿಂಗಳ ಕಾಲಾವಕಾಶ ನೀಡಿ ಮಣ್ಣು ಪರೀಕ್ಷೆಗೆ ಸರ್ಕಾರದಿಂದ ಎಷ್ಟು ಹಣ ಬಿಡುಗಡೆಯಾಗಿದೆ? ಎಷ್ಟು ಗ್ರಾಮಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಲಾಗಿದೆ? ಎಂಬುದರ ಮಾಹಿತಿ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಕಳೆದ ಕೆಲವು ದಿನಗಳಿಂದ ಇದರ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ದಾಖಲಾತಿಗಳನ್ನು ಕೇಳಲಾಗಿದೆ. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಒಂದು ವೇಳೆ ನಮಗೆ ಸರಿಯಾದ ಮಾಹಿತಿ ನೀಡದಿದ್ದರೆ ಲೋಕಾಯುಕ್ತದಲ್ಲಿಯೂ ಪ್ರಕರಣ ದಾಖಲಿಸಲಾಗುವುದು ಮತ್ತು ಕಾನೂನು ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ ಹಾಗೂ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶ್ ಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಹಿರಿಯ ನಾಗರಿಕ ವೇದಿಕೆಯ ಮುಖಂಡ ಬಿ.ಕೆ. ಮಂಜುನಾಥ, ಸಿಐಟಿಯುನ ಧರ್ಮೇಶ್ ಹಾಜರಿದ್ದರು.