ಲಕ್ಷ್ಮೇಶ್ವರ: ಕೃಷಿಯೇ ಮೂಲಾಧಾರವಾಗಿರುವ ಉತ್ತರ ಕರ್ನಾಟಕದ ರೈತ ಸಮುದಾಯಕ್ಕೆ ಶೀಗಿ ಹುಣ್ಣಿಮೆ, ಕಾರ ಹುಣ್ಣಿಮೆ, ಎಳ್ಳು ಅಮಾವಾಸ್ಯೆಯಂತೆ ಮಣ್ಣೆತ್ತಿನ ಅಮಾವಾಸ್ಯೆಯೂ ರೈತರ ಸಮುದಾಯಕ್ಕೆ ಮಹತ್ವದ್ದಾಗಿದೆ. ಅಮಾವಾಸ್ಯೆಯಂದು ಮಣ್ಣೆತ್ತುಗಳನ್ನು ಪೂಜಿಸುತ್ತಾರೆ.
ಕುಂಬಾರರು ತಿಂಗಳ ಹಿಂದಿನಿಂದಲೇ ಮಣ್ಣಿನ ಎತ್ತಿನ ಮೂರ್ತಿಗಳನ್ನು ಸಿದ್ಧಪಡಿಸಿರುತ್ತಾರೆ. ನಿಜ ಎತ್ತುಗಳ ಮಾರಾಟದ ಸಂತೆಗೆ ಕರೊನಾ ಗ್ರಹಣ ಹಿಡಿದಿದ್ದರೆ ಜೋಡೆತ್ತಿನ ಮೂರ್ತಿಗಳ ಜತೆಗೆ ಗ್ವಾದಲಿ, ಬಾನಿಗಳ ಮಾರಾಟ ಎಲ್ಲೆಡೆ ಜೋರಾಗಿದೆ. ಅಮಾವಾಸ್ಯೆ ನಿಮಿತ್ತ ಹೂವು, ಬಾಳೆಹಣ್ಣು, ತೆಂಗಿನಕಾಯಿಗಳ ಮಾರಾಟವೂ ತುಸು ಜೋರಾಗಿಯೇ ನಡೆದಿದೆ.
ಮಣ್ಣೆತ್ತಿನ ಮೂರ್ತಿಗಳನ್ನು ದೇವರ ಜಗುಲಿಯ ಮೇಲಿಟ್ಟು ಕರಿಗಡುಬು, ಕಿಚಡಿ ಪ್ರಸಾದ ಮಾಡಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಮರುದಿನ ಪೂಜೆ ಮಾಡಿದ ಮಣ್ಣೆತ್ತುಗಳನ್ನು ಬನ್ನಿ ಮರದ ಕೆಳಗಿಟ್ಟು ವರ್ಷ ಪೂರ್ತಿ ನಮಿಸುತ್ತಾರೆ.
ಅನಾದಿ ಕಾಲದಿಂದಲೂ ಕೃಷಿಕನ ಮಿತ್ರ ಜೋಡೆತ್ತುಗಳಿಗೆ ಪೂಜನೀಯ ಸ್ಥಾನಮಾನವಿದೆ. ಸಮೃದ್ಧ ಬೆಳೆ ಬರಲಿ, ಜೀವನಾಡಿ ಜೋಡೆತ್ತುಗಳಿಗೆ ಯಾವ ತೊಂದರೆ ಬಾರದಿರಲಿ ಎಂದು ಈ ಅಮಾವಾಸ್ಯೆ ಆಚರಿಸಲಾಗುತ್ತದೆ. | ಪ್ರಧಾನೆಪ್ಪ ಬಟ್ಟೂರ, ಶಿವಾನಂದ ಲಿಂಗಶೆಟ್ಟಿ ಪ್ರಗತಿಪರ ರೈತರು
ಮಣ್ಣೆತ್ತು ತಯಾರಿಕೆ ಹಿರಿಯರ ಬಳುವಳಿಯಾಗಿದೆ. ಜೋಡೆತ್ತಿನ ಮೂರ್ತಿಗಳು 30 ರಿಂದ 50 ರೂ.ಗಳವರೆಗೆ ಹಾಗೂ ವಿಶೇಷವಾಗಿ ತಯಾರಿಸಲಾದ ದೊಡ್ಡ ಪ್ರಮಾಣ ಮಣ್ಣೆತ್ತಿನ ಮೂರ್ತಿಗಳು 500 ರೂ. ವರೆಗೂ ಮಾರಾಟವಾಗುತ್ತವೆ. ಸಿದ್ಧಪಡಿಸಿದ ಎಲ್ಲ ಮೂರ್ತಿಗಳು ಮಾರಾಟವಾದರೆ ಮಾತ್ರ ಒಂದಿಷ್ಟು ಕಾಸು ಉಳಿಯುತ್ತದೆ. | ಕುಮಾರ ಕುಂಬಾರ, ಷಣ್ಮುಖ ಕುಂಬಾರ, ಫಕೀರೇಶ ಕುಂಬಾರ, ಮೂರ್ತಿ ತಯಾರಕರು
EndFragment