ಜಿಲ್ಲೆ

ಮಣ್ಣಿಗೆ ಹಾನಿಮಾಡದ ನ್ಯಾನೋ ಯೂರಿಯಾ : ಶಾಸಕ ಕೆ.ಶ್ರೀನಿವಾಸಗೌಡ ಅಭಿಮತ, ವರ್ಚುಯಲ್​ನಲ್ಲಿ ಭಾಗಿ

Kolar

ಕೋಲಾರ: ಭೂಮಿ, ಬೆಳೆಗೆ ಅಡ್ಡಪರಿಣಾಮಗಳಿಲ್ಲದ ಇಫ್ಕೋ ತಯಾರಿಸಿರುವ ವಿಶ್ವದ ಪ್ರಥಮ ನ್ಯಾನೋ ಯೂರಿಯಾವನ್ನು ಪ್ರಧಾನಿ ನರೇಂದ್ರಮೋದಿ ಲೋಕಾರ್ಪಣೆ ಮಾಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದ ಟಿಎಪಿಸಿಎಂಎಸ್​ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಜರಾತ್​ನ ಕಲೋಲ್​ನಲ್ಲಿ ಮೋದಿ ಅವರು ಯೂರಿಯಾ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ ವರ್ಚುಯಲ್​ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೈತರಿಗೆ ಗೊಬ್ಬರ ವಿತರಿಸಿ ಮಾತನಾಡಿದರು.

ಪ್ರಸ್ತುತ ರೈತರು ಬಳಸುತ್ತಿರುವ ಯೂರಿಯಾವನ್ನು 100 ಕೆ.ಜಿಯಷ್ಟು ಬೆಳೆಗೆ ಹಾಕಿದರೆ ಕೇವಲ 25 ಕೆ.ಜಿ ಮಾತ್ರ ಬೆಳೆಗೆ ಸಿಗುತ್ತದೆ. ಉಳಿದ ಗೊಬ್ಬರ ಭೂಮಿ, ಅಂತರ್ಜಲಕ್ಕೆ ಸೇರಿ ಜೀವ ಸಂಕುಲಕ್ಕೆ ಮಾರಕವಾಗುತ್ತಿದೆ. ಇದನ್ನು ಮನಗಂಡ ಮೋದಿ ಅವರು ಆತ್ಮನಿರ್ಭರ ಯೋಜನೆಯಡಿ ಪರ್ಯಾಯ ಮಾರ್ಗಕ್ಕಾಗಿ ಸೂಚಿಸಿದ್ದರಿಂದ ಇಫ್ಕೊ ನಿರಂತರ ಸಂಶೋಧನೆ ಮಾಡಿ ನ್ಯಾನೋ ಯೂರಿಯಾವನ್ನು ಕೊಡುಗೆಯಾಗಿ ನೀಡಿದೆ ಎಂದು ತಿಳಿಸಿದರು.

ಇಫ್ಕೋ ಎಂಡಿ ಡಾ.ಯು.ಎಸ್​.ಅವಸ್ಥಿ ಅವರು 2017ರಲ್ಲೇ ನ್ಯಾನೋ ಯೂರಿಯಾವನ್ನು ಸದಾನಂದಗೌಡರು ಸಚಿವರಾಗಿದ್ದಾಗ ನೀಡಿದ್ದು, ಅದನ್ನು 11 ಸಾವಿರ ರೈತರ ಗದ್ದೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೃಷಿ, ವಿಜ್ಞಾನ ಕೇಂದ್ರಗಳಲ್ಲಿ ನಿರಂತರ ಪರೀಕ್ಷಿಸಿದ ನಂತರ ಅನುಮೋದಿಸಿ ಈಗ ಲೋಕಾರ್ಪಣೆ ಮಾಡಿದ್ದಾರೆ ಎಂದರು.

ಟಿಎಪಿಸಿಎಂಎಸ್​ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ, ಇಫ್ಕೋ ದೇಶದ ಖಜಾನೆಗೆ ಪ್ರತಿ ವರ್ಷ 1 ಲಕ್ಷ ಕೋಟಿ ರೂ. ಸಬ್ಸಿಡಿ ಹಣ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಇಫ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ, ದೇಶದ ರಾಸಾಯನಿಕ ಗೊಬ್ಬರಗಳ ಅಗತ್ಯತೆಯಲ್ಲಿ ಶೇ.60 ಇಫ್ಕೋ ಸಂಸ್ಥೆಯೇ ಪೂರೈಸುತ್ತಿದೆ. ನ್ಯಾನೋ ಯೂರಿಯಾದಿಂದ ಭೂಮಿ ಹಾಳಾಗಲ್ಲ. ಪರಿಸರ, ಅಂತರ್ಜಲಕ್ಕೆ ಹಾನಿ ಇಲ್ಲ. ಸಬ್ಸಿಡಿ ರಹಿತವಾಗಿದೆ. 2022&-23 ರಲ್ಲಿ ದೇಶದ ಖಜಾನೆಗೆ 2.5 ಲಕ್ಷ ಕೋಟಿ ಸಬ್ಸಿಡಿಯ ಹೊರೆ ಇಳಿಸಲಿದೆ. 1 ಲೀಟರ್​ ನ್ಯಾನೋ ಯೂರಿಯಾ 2 ಚೀಲ ಗೊಬ್ಬರಕ್ಕೆ ಸಮವಾಗಲಿದ್ದು, ಸಸ್ಯಗಳಿಗೆ 2 ಬಾರಿ ಸಿಂಪಡಿಸಿದರೆ ಸಾಕು, ಒಂದು ಲೀಟರ್​ ನೀರಿಗೆ 5 ಎಂಎಲ್​ ನ್ಯಾನೋ ಯೂರಿಯಾ ಮಿಶ್ರಣ ಮಾಡಿ ಸಿಂಪಡಿಸಬಹುದು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ, ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್​, ಮುಖಂಡರಾದ ಹೆಬ್ಬಟ ನಾರಾಯಣಗೌಡ, ಕೆ.ಟಿ.ಗೋಪಾಲಪ್ಪ, ವೆಂಕಟರಾಮೇಗೌಡ, ಶ್ರೀರಾಮೇಗೌಡ, ಇರಗಸಂದ್ರ ರಮೇಶ್​, ಮಾಧವ, ಮುನೇಗೌಡ, ಸರ್ವೇಶ್​, ಕೃಷ್ಣಪ್ಪ, ಇಫ್ಕೋ ಸಂಸ್ಥೆಯ ಚೇತನ್​ ಮತ್ತಿತರರು ಉಪಸ್ಥಿತರಿದ್ದರು.

ದೇವನಹಳ್ಳಿ ಸಮೀಪ ಘಟಕ ಸ್ಥಾಪನೆ: ಯೂರಿಯಾ ಮತ್ತು ಇತರ ರಸಗೊಬ್ಬರವನ್ನು ಮಿತಿಮೀರಿ ಬಳಸಿದ್ದರಿಂದ ಮಣ್ಣಿನ ಫಲವತ್ತತೆ ನಾಶವಾಗಿ ಜೀವ ಸಂಕುಲಕ್ಕೆ ಶಾಪವಾಗಿದೆ. ನ್ಯಾನೋ ಗೊಬ್ಬರ ಕೃಷಿಗೆ ವರವಾಗಲಿದೆ. ದೇಶದ 10 ಕಡೆಗಳಲ್ಲಿ ನ್ಯಾನೋ ಘಟಕಗಳನ್ನು ಸ್ಥಾಪಿಸಲಿದ್ದು, ದಕ್ಷಿಣ ಭಾರತಕ್ಕೆ ನ್ಯಾನೋ ಯೂರಿಯಾ ಪೂರೈಕೆಗಾಗಿ ದೇವನಹಳ್ಳಿ ಸಮೀಪ ಘಟಕ ಸ್ಥಾಪನೆಗೆ ಇಫ್ಕೋ ಮುಂದಾಗಿರುವುದು ಶ್ಲಾಘನೀಯ ಎಂದು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.