ಜಿಲ್ಲೆ

ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಸಂಘರ್ಷಕ್ಕೆ ಸಿಲುಕಿ ನಲುಗಿ ಹೋಗಿರುವ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆಗೆ ಆಗ್ರಹಿಸಿ ನಾಗರಿಕರ ಧ್ವನಿ ವೇದಿಕೆ ವತಿಯಿಂದ ನಗರದ ಸಂತ ಫಿಲೋಮಿನಾ ಚರ್ಚ್ ಎದುರು ಶುಕ್ರವಾರ ಕೆಲ ನಿಮಿಷಗಳ ಕಾಲ ಪ್ರತಿಭಟನೆ ನಡೆಯಿತು.


ಭಿತ್ತಪತ್ರ ಪ್ರದರ್ಶಿಸಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನೆಯನ್ನು ತಡೆದರು. ಪ್ರತಿಭಟನೆಗೆ ಅನುಮತಿ ಪಡೆಯಲಾಗಿದೆ. ಆದಾಗ್ಯೂ ಏಕೆ ತಡೆಯಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅನುಮತಿ ಪತ್ರವನ್ನು ತೋರಿದರು. ಇದಕ್ಕೆ ಪೊಲೀಸರು, ‘ಈ ಸ್ಥಳದಲ್ಲಿ ಪ್ರತಿಭಟನೆ ಮಾಡಬೇಡಿ, ಡಿಸಿ ಕಚೇರಿಯ ಬಳಿ ಮಾಡಿ’ ಎಂದು ಸೂಚಿಸಿದರು.


ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ಪ್ರತಿಭಟನೆ ತಡೆದಿರುವ ಪೊಲೀಸರ ಕ್ರಮ ಸರಿಯಲ್ಲ. ಜನ ಸೇರಿ ಪ್ರತಿಭಟನೆ ನಡೆಸಿದರೆ ಕಾನೂನು ಸುವ್ಯವಸ್ಥೆಗೆ ಯಾವುದೇ ಭಂಗ ಬರಲ್ಲ. ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ, ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಕಿಡಿಕಾರಿದರು.


ರಾಷ್ಟ್ರಪತಿ ಆಳ್ವಿಕೆ ಹೇರಬೇಕು:
ಮಣಿಪುರದಲ್ಲಿ ಕಳೆದ 3 ವರ್ಷಗಳಿಂದ ದೌರ್ಜನ್ಯ ನಡೆದಿದ್ದರೂ ಪ್ರಧಾನಿ ಮಾತನಾಡಿಲ್ಲ. ಇದು ಖಂಡನೀಯ. ಅಲ್ಲಿನ ಬಿಜೆಪಿ ಸರ್ಕಾರ ವಜಾಗೊಳಿಸಬೇಕು. ಶಾಂತಿ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ನೂರಾರು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ತಮ್ಮ ಮನೆ, ವಸ್ತುಗಳನ್ನು ತೊರೆದು ವಿವಿಧ ಶಿಬಿರಗಳಲ್ಲಿದ್ದಾರೆ. ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ನೂರಾರು ಮನೆಗಳನ್ನು ಸುಟ್ಟುಹಾಕಲಾಗಿದೆ. ಆದಿವಾಸಿ ಸಹೋದರ ಸಹೋದರಿಯರು ಈ ಹಿಂಸಾಚಾರಕ್ಕೆ ಬಲಿಯಾಗಿರುವುದು ಹೆಚ್ಚು ಭಯಾನಕವಾಗಿದೆ. ಅಲ್ಲಿನ ರಾಜ್ಯದ ಆಡಳಿತ ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದರು.


ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮರುಸ್ಥಾಪಿಸಬೇಕು. ಅದಕ್ಕಾಗಿ ಕೇಂದ್ರ ಸರ್ಕಾರವು ಮಣಿಪುರ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಅಸ್ಥಿರತೆ, ಅಶಾಂತಿ, ಅಭದ್ರತೆ, ಹಿಂಸಾಚಾರ ಸೃಷ್ಟಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಕಾಳಚನ್ನೇಗೌಡ, ಪ್ರಗತಿಪರ ಹೋರಾಟಗಾರರಾದ ಪ್ರೊ.ಲತಾ ಕೆ.ಬಿದ್ದಪ್ಪ, ಎಂ.ಎಫ್.ಕಲೀಂ, ಪ್ರೊ.ಪಿ.ವಿ.ನಂಜರಾಜ ಅರಸು, ಸ್ವರೂಪರಾವ್, ಪಾಲಿಕೆ ಮಾಜಿ ಸದಸ್ಯ ಶೌಕತ್ ಆಲಿ, ಅಬ್ದುಲ್ ರಹಮಾನ್, ಮುಖಂಡರಾದ ಸಾ.ರಾ.ಗೋಪಾಲ್, ಆಜಂ ಪಾಷ, ಇದ್ರೀಸ್, ಘೋಷ್ ಬಾಬು, ಮಹಮ್ಮದ್ ಹನೀಫ್, ಕಲ್ಲಹಳ್ಳಿ ಕುಮಾರ್, ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ ಇತರರು ಇದ್ದರು.