ಮೈಸೂರು: ಸಂಘರ್ಷಕ್ಕೆ ಸಿಲುಕಿರುವ ಮಣಿಪುರದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆಗೆ ತ್ವರಿತವಾಗಿ ಕ್ರಮವನ್ನು ಕೇಂದ್ರ ಸರ್ಕಾರ ಮತ್ತು ಅಲ್ಲಿಯ ರಾಜ್ಯ ಸರ್ಕಾರವು ತೆಗೆದುಕೊಳ್ಳಬೇಕು ಎಂದು ಜನಪರ ಹೋರಾಟಗಾರ ಶಿವಸುಂದರ್ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ನಗರದ ಬನ್ನಿಮಂಟಪದಲ್ಲಿರುವ ಒಡಿಪಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಒಕ್ಕೂಟ ಹತ್ತು : ಸ್ತ್ರೀ ವಾದಿ ಸಂವಾದ’ ಕಾರ್ಯಕ್ರಮದಲ್ಲಿ ‘ಮಣಿಪುರ ಪ್ರಕರಣ-ಸುತ್ತಮುತ್ತ’ ಕುರಿತು ಮಾತನಾಡಿದರು. ಮಣಿಪುರದ ಪ್ರತಿಯೊಬ್ಬರ ಹಕ್ಕುಗಳ ರಕ್ಷಣೆಯನ್ನು ಮಾಡಬೇಕೆ ಹೊರತು ಒಂದು ಜನಾಂಗದ ರಕ್ಷಣೆಗೆ ಮಾತ್ರ ಮುಂದಾಗಬಾರದು ಎಂದರು.
ಈಶಾನ್ಯ ಭಾರತವನ್ನು ಹಿಂದು ಧ್ರುವೀಕರಣಗೊಳಿಸುವ ಹುನ್ನಾರ ನಡೆದಿದೆ. ಮಣಿಪುರ ಗಲಭೆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಷಡ್ಯಂತ್ರ ನಡೆಸಿದೆ. ಈ ಹಿನ್ನೆಲೆಯಲ್ಲಿ ಕುಕಿ ಬುಡಕಟ್ಟು ಸಮುದಾಯ ಮೇಲೆ ಮೈತೇಯಿ ಸಮುದಾಯವನ್ನು ಎತ್ತಿ ಕಟ್ಟಿ ಮಣಿಪುರ ಗಲಭೆಯನ್ನು ಮತ್ತಷ್ಟು ಭೀಕರಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮೌನ ಈ ಗಲಭೆಗೆ ಇನ್ನಷ್ಟು ಪ್ರೋತ್ಸಾಹ ಕೊಟ್ಟಿದೆ ಎಂದು ಆರೋಪಿಸಿದರು.
ಕುಕಿ ಸಮುದಾಯದ ಮೇಲೆ ಮೈತೇಯಿ ಸಮುದಾಯ ಹಿಡಿತ ಸಾಧಿಸಲು ಮುಂದಾಗಿದೆ. ‘ಕುಕಿ ಜನರು ನಮ್ಮವರಲ್ಲ’ ಎಂದು ಮೈತೇಯಿ ಸಮುದಾಯದವರು ಅಂದುಕೊಂಡಿದ್ದಾರೆ. ಇದರಿಂದಾಗಿ ಜಾತಿ, ಕೋಮು ದ್ವೇಷ ಉಲ್ಬಣಿಸಿದೆ ಎಂದರು.
‘ಸೌಜನ್ಯಾ ಪ್ರಕರಣ-ಮುಂದಿನ ಹೆಜ್ಜೆಗಳು’ ಕುರಿತು ಮಾತನಾಡಿದ ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ, ಸೌಜನ್ಯಾ ಪ್ರಕರಣ ಕುರಿತು ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಪ್ರಕರಣ ಮುಗಿದು ಹೋಗಿರುವ ಅಧ್ಯಾಯ, ಮರು ತನಿಖೆ ಅಗತ್ಯ ಇಲ್ಲ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಖಂಡನೀಯ. ಲೋಕಸಭಾ ಚುನಾವಣೆಯಲ್ಲಿ ವೋಟ್ ಬ್ಯಾಂಕ್ ಕಳೆದುಕೊಳ್ಳಬೇಕಾಗುತ್ತದೆ ಎಂಬ ಅಂಜಿಕೆಯಿಂದ ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
‘ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಮಹಿಳಾ ಚಳವಳಿಯ ಮುಂದಿರುವ ಸವಾಲುಗಳು’ ಕುರಿತು ಮಹಿಳಾ ಹೋರಾಟಗಾರ್ತಿ ಡಾ.ದು.ಸರಸ್ವತಿ ಮಾತನಾಡಿದರು. ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರತಿ ರಾವ್, ಆರ್‌ಎಲ್‌ಎಚ್‌ಪಿಯ ಸರಸ್ವತಿ, ಒಡನಾಡಿ ಸಂಸ್ಥೆ ನಿರ್ದೇಶಕ ಪರಶುರಾಮ್, ರಂಗಕರ್ಮಿ ಸಿ.ಬಸವಲಿಂಗಯ್ಯ, ಸಾಹಿತಿ ಪ್ರೊ.ಕಾಳೇಗೌಡ ನಾಗವರ ಇನ್ನಿತರರಿದ್ದರು.