ಜಿಲ್ಲೆ

ಮಣಿಪುರದ ಗಲಭೆಗೆ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಮೈಸೂರು: ಮಣಿಪುರದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಜನಾಂಗೀಯ ಹತ್ಯೆ ಮತ್ತು ಗಲಭೆ ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ನಗರದ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಎರಡು ತಿಂಗಳಿಂದ ಮಣಿಪುರದಲ್ಲಿ ಆರಂಭವಾದ ಕೋಮುವಾದ ಗಲಭೆ ಹೆಚ್ಚಾಗುತ್ತಿದ್ದು, ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಈಗಲೂ ಮುಂದುವರಿಯುತ್ತಿವೆ. ಇದರ ಪರಿಣಾಮವಾಗಿ ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೂರಿದರು.
ಮಣಿಪುರ ಹೊತ್ತಿ ಉರಿಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಆನುಸರಿಸುತ್ತಿರುವ ತಾರತಮ್ಯ ನೀತಿಗಳಿಂದ, ಮೀಸಲಾತಿ, ಅರಣ್ಯಗಳ ಮೇಲಿನ ಹಕ್ಕುಗಳ ಕುರಿತು ಒಡೆದು ಆಳುವ ರೀತಿಯಲ್ಲಿ ಕೈಗೊಂಡ ತಪ್ಪು ನೀತಿಗಳಿಂದಲೇ ಈ ಹಿಂಸಾಚಾರ ಉಲ್ಬಣಗೊಳ್ಳುತ್ತಿದೆ ಎಂದು ಆರೋಪಿದರು.
ಈವರೆಗೂ ಪ್ರಧಾನಮಂತ್ರಿ ಈ ಕುರಿತು ಒಂದೇ ಒಂದು ಮಾತು ಸಹ ಆಡದಿರುವುದು ಅತ್ಯಂತ ದುರದೃಷ್ಟಕರ. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಮೋದಿ ಅಮೆರಿಕದಲ್ಲಿ ವ್ಯಾಪಾರಿ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದು ದುರದೃಷ್ಟಕರ ಎಂದು ದೂರಿದರು.
ಮೈತೇಯಿ ಹಾಗೂ ಕುಕಿ ಜನಾಂಗದ ನಡುವೆ ಭಾತೃ ಹಂತಕ ಹಿಂಸಾಚಾರ ನಡೆಯುತ್ತಿದ್ದು, ಕೇಂದ್ರ ಮತ್ತು ಮಣಿಪುರದಲ್ಲಿ ಬಿಜೆಪಿಯೇ ಆಡಳಿತದಲ್ಲಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಶಾಂತಿ ನೆಲೆಸಲು, ಜನಜೀವನ ಮೊದಲಿನ ಸ್ಥಿತಿಗೆ ಬರಲು ಕ್ರಮ ಕೈಗೊಳ್ಳುವ ಬದಲು ಜನರ ಜೀವನದೊಂದಿಗೆ ಆಟವಾಡುವ ಮನಃಸ್ಥಿತಿ ಪ್ರದರ್ಶನ ಮಾಡುತ್ತಿವೆ ಎಂದು ಟೀಕಿಸಿದರು.
ಸರ್ಕಾರದ ಒಡೆದು ಆಳುವ ನೀತಿಗೆ ದಾಳವಾಗದೆ ಮಣಿಪುರದ ಎರಡೂ ಜನಾಂಗಗಳ ದುಡಿಯುವ ಜನತೆ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು, ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಬೇಕಾದ ಐಕ್ಯತೆ ಎತ್ತಿ ಹಿಡಿಯಬೇಕು. ಸರ್ಕಾರಗಳು ಕೂಡಲೇ ಗಲಭೆ ನಿಲ್ಲಿಸಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಮುಖಂಡರಾದ ಚಂದ್ರಶೇಖರ ಮೇಟಿ, ಪಿ.ಎಸ್. ಸಂಧ್ಯಾ, ಜಿ.ಎಸ್.ಸೀಮಾ, ಯಶೋಧರ್, ಹರೀಶ್, ಸುಮಾ, ಸುಭಾಷ್, ಚಂದ್ರಕಲಾ ಇತರರು ಇದ್ದರು.