ಜಿಲ್ಲೆ

ಮಡೆನೂರು ಮನು ವಿರುದ್ಧ ಶಿವರಾಜಕುಮಾರ್ ಅಭಿಮಾನಿಗಳ ಪ್ರತಿಭಟನೆ

ಹಾಸನ: ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿರುವ ಮಡೆನೂರು ಮನು ಡಾ. ಶಿವರಾಜ ಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಕೂಡಲೇ ಆತನ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜಕುಮಾರ್, ಡಾ. ಶಿವರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿ ಸಂಘದಿಂದ ಬುಧವಾರ ಪ್ರತಿಭಟಿಸಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ಇದೆ ವೇಳೆ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ರತೀಶ್ ಕುಮಾರ್ ಮಾತನಾಡಿ, ಮಡೆನೂರು ಮನು ಎಂಬಾತ ಕುಡಿದ ನಶೆಯಲ್ಲಿ ಡಾ. ರಾಜಕುಮಾರ್ ಅವರ ಸುಪತ್ರರಾದ ಡಾ. ಶಿವರಾಜ ಕುಮಾರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಕುಲದಲ್ಲಿ ಕೀಳ್ಯಾವುದೋ ಎಂಬ ಚಿತ್ರದಲ್ಲಿ ನಟಿಸಿ, ತಾನೇ ಹೀರೋ ಎಂದು ಬಡಾಯಿಸುತ್ತಾ ದುರಹಂಕಾರದಿಂದ ಮನ ಬಂದಂತೆ ಮಾತನಾಡಿದ್ದಾನೆ. ಡಾ. ರಾಜಕುಮಾರ್ ಕುಟುಂಬದ ಮೇಲೆ ಇದುವರೆಗೂ ಯಾರೊಬ್ಬರೂ ಈ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಆದ್ದರಿಂದ ಕೂಡಲೇ ಮಡೆನೂರು ಮನು ಎಂಬಾತನನ್ನು ಬಂಧಿಸಿ ಅವನ ಮೇಲೆ ಪ್ರಕರಣ ದಾಖಲಿಸಿ ಅವನಿಂದ ಕ್ಷಮೆಯಾಚಿಸಿ, ಅವನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಹಾಸನ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಜಕ್ಕನಹಳ್ಳಿ ಮೋಹನ್ ಕುಮಾರ್ ಮಾತನಾಡಿ, ಡಾ. ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ನಾವು ಮಡೆನೂರು ಹೇಳಿಕೆ ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ಡಾ. ರಾಜ್ ಮತ್ತು ಕುಟುಂಬವು ಕಲಾ ಸೇವೆಯನ್ನು ಬಹಳಷ್ಟು ಮಾಡಿದೆ. ಅವರ ಸಿನಿಮಾಗಳು ಕರ್ನಾಟಕದ ಜನರಿಗೆ ಸ್ಫೂರ್ತಿಯಾಗಿವೆ. ಡಾ. ಶಿವರಾಜಕುಮಾರ್ ಅವರ ಬಗ್ಗೆ ಮಡೆನೂರು ಮನು ಅವಹೇಳನಕಾರಿ ರೀತಿ ಮಾತನಾಡಿರುವುದು ಉತ್ತಮ ಬೆಳೆವಣಿಗೆಯಲ್ಲ. ಕೂಡಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಅಭಿಮಾನಿ ಸಂಘದ ಮಹಿಳಾ ಘಟಕದ ಅಧ್ಯಕ್ಷ ವಿಜಯಲಕ್ಷ್ಮೀ ಅಂಜನಪ್ಪ ಮಾತನಾಡಿ, ಮಡೆನೂರು ಮನು ಅವರು ನಮ್ಮ ನಾಯಕ ನಟ ಶಿವಣ್ಣರ ಆಯಸ್ಸು ಹೇಳುವುದಕ್ಕೆ ಇವನು ಯಾರು? ಈತ ನಮ್ಮ ಹಾಸನದ ಮರ್ಯಾದೆ ತೆಗೆದವನು. ಇವನನ್ನು ಬಿಡಬಾರದು. ಇವನಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಭಾಗ್ಯಾ, ಶೋಭಾ ಶಂಕರ್, ಎಚ್.ಎಂ. ಶಂಕರ್, ಜನಾರ್ದನ್, ವಿಜಯಣ್ಣ, ಸಾಲಗಾಮೆ ರಾಜಣ್ಣ, ಜಕ್ಕನಹಳ್ಳಿ ಕುಮಾರ್, ಶರತ್. ರಮೇಶ್, ಪ್ರವೀಣ್, ಭಾನುಪ್ರಕಾಶ್, ವಿನುತಾ ಕುಮಾರ್, ರವಿಕುಮಾರ್, ರೇವಣ್ಣ ಇತರರು ಉಪಸ್ಥಿತರಿದ್ದರು.