ಜಿಲ್ಲೆ

ಮಡಿವಾಳರನ್ನ ಪರಿಶಿಷ್ಟ ಜಾತಿಗೆ ಸೇರಿಸಿ

ಚಳ್ಳಕೆರೆ: ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿರುವ ಮಡಿವಾಳ ಸಮುದಾಯವನ್ನು ಮೀಸಲಾತಿಯಡಿ ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಜಗದ್ಗುರು ಮಾಚಿದೇವ ಮಹಾಸಂಸ್ಥಾನ ಮಠದ ಮಡಿವಾಳ ಡಾ.ಬಸವ ಮಾಚಿದೇವ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಛೇಂಬರ್ ಆಫ್ ಕಾಮರ್ಸ್‌ ಕಲ್ಯಾಣ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಮಾಚಿದೇವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 45ರಿಂದ 50 ಲಕ್ಷ ಜನಸಂಖ್ಯೆ ಇದೆ. ಜನಾಂಗದ ಸಾಮಾಜಿಕ ಸುಧಾರಣೆ ಮತ್ತು ಸಮಾಜದ ಮುಖ್ಯವಾಹಿನಿಗೆ ಬರಲು ಎಸ್ಸಿ ಮೀಸಲಾತಿ ಬೇಕಿದೆ. ಈಗಾಗಲೇ ಅನೇಕ ಬಾರಿ ಆಡಳಿತ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನ ಸಮುದಾಯದ ಸಂಘಟನೆಗಾಗಿ ನಗರ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ವಿದ್ಯಾರ್ಥಿ ನಿಲಯದ ಅಭಿವೃದ್ಧಿ, ಮಡಿ ಕಟ್ಟೆಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಅವರಿಗೆ ಮನವಿ ಮಾಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಮುದಾಯ ಭವನಕ್ಕೆ ಜಾಗ ನಿಗದಿಗೊಳಿಸಿದರೆ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಮೂಲ ಸೌಕರ್ಯ ಮತ್ತು ಮಡಿಕಟ್ಟೆಗಳ ನಿರ್ಮಾಣ ಮಾಡಿಕೊಡಲು ಶೀಘ್ರದಲ್ಲೇ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸಮುದಾಯ ಶೈಕ್ಷಣಿಕವಾಗಿ ಬಲಗೊಳ್ಳಬೇಕಿದೆ ಎಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ರಾಮಜ್ಜ ಮಾತನಾಡಿ, ಸಮಾಜದ ಬಹುವರ್ಷಗಳ ಬೇಡಿಕೆ ಆಗಿರುವ ಪರಿಶಿಷ್ಟ ಜಾತಿ ಸೇರ್ಪಡೆಗೆ ಅವಕಾಶ ಸಿಗುತ್ತಿಲ್ಲ. ಅನ್ನಪೂರ್ಣಮ್ಮ ವರದಿಯಂತೆ ಕುಲಶಾಸ್ತ್ರ ಅಧ್ಯಯನವಾಗಿ ಮಡಿವಾಳ ಜನಾಂಗ ಪರಿಶಿಷ್ಟ ಜಾತಿಗೆ ಸೇರ್ಪಡೆ ಆಗುವ ಅರ್ಹತೆ ಇದೆ ಎಂದು 2013ರ ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದರು.
ವಡೇರಹಳ್ಳಿ ಹನುಮಂತರಾಯ ಸ್ವಾಮಿ, ಪೊಲೀಸ್ ಉಪ ಅಧೀಕ್ಷಕ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಪರಶುರಾಂಪುರ ಹೋಬಳಿ ಅಧ್ಯಕ್ಷ ಶಶಿಧರ, ಮಡಿವಾಳ ಮಾಚಿದೇವ ತಾಲೂಕು ಅಧ್ಯಕ್ಷ ಎನ್. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಪುಟ್ಟರಂಗಪ್ಪ, ಸಂಘಟನಾ ಕಾರ್ಯದರ್ಶಿ ಓಂಕಾರಪ್ಪ, ಕರವೇ ಮಂಜುನಾಥ, ಆರ್ಟ್‌ಸನ್ ಪ್ರಕಾಶ್, ಮಾಚಿಪ್ರಭು ಈರಣ್ಣ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ ಇದ್ದರು.