ಬೀದರ್: ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾಗಿ ಯುವ ಮುಖಂಡ ಸುಭಾಷ ಮಡಿವಾಳ ನೇಮಕಗೊಂಡಿದ್ದಾರೆ. ನಗರದ ದೇವಿ ಕಾಲನಿಯ ದೇವಿ ಮಂದಿರದಲ್ಲಿ ಜರುಗಿದ ಸಮಾಜದ ಪ್ರಮುಖರ ಸಭೆಯಲ್ಲಿ ಸರ್ವಸಮ್ಮತದಿಂದ ಈ ನೇಮಕ ನಡೆಯಿತು.
ಅಧ್ಯಕ್ಷ ಸ್ಥಾನದ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚಿಸಿ, ಸಮಾಜದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಸುಭಾಷ ಮಡಿವಾಳ ಅವರಿಗೆ ಆಯ್ಕೆ ಮಾಡಲು ನಿರ್ಣಯಿಸಿದರು. ಇದೇ ವೇಳೆ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ ಕಂದಗೂಳ ಅವರನ್ನು ನೇಮಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಸುಭಾಷ ಮಡಿವಾಳ, ಕಳೆದ 24 ವರ್ಷದಿಂದ ಸಮಾಜದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವೆ. ಹಿರಿಯರ ಜತೆಗೆ ಸೇರಿ ಜಿಲ್ಲಾದ್ಯಂತ ಕೆಲಸ ಮಾಡಿದ ಅನುಭವ ಇದೆ. ನನ್ನ ಮೇಲೆ ವಿಶ್ವಾಸವಿಟ್ಟು ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಿದ್ದು, ಎಲ್ಲರಿಗೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಕರ್ತವ್ಯ ನಿಭಾಯಿಸುವೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಸಮಾಜದ ಪ್ರಮುಖರ ಸಭೆ ಕರೆದು ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಮಾಡಲಾಗುವುದು ಎಂದರು.
ಸಮಾಜದ ಪ್ರಮುಖರಾದ ಧನರಾಜ ಮಡಿವಾಳ, ದಿಲೀಪ ಮಡಿವಾಳ, ದಿಗಂಬರ ಮಡಿವಾಳ, ರಮೇಶ ದರ್ಗಾಪುರೆ, ಸಂಗಮೇಶ ನ್ಯಾಲಕಲ್, ಅಶೋಕ ತೇಲಂಗೆ ಇತರರಿದ್ದರು.