ಹಾಸನ: ಮಡಿವಾಳ ಮಾಚಿದೇವನವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಿ ಸದೃಢ ಸಮಾಜ ನಿರ್ಮಾಣ ಮಾಡೋಣ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ.ಕೃಷ್ಣೆಗೌಡ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಧೆ ಮುಖ್ಯವಲ್ಲ, ನಾವು ಶಿಕ್ಷಣ ಪಡೆದುಕೊಳ್ಳುವ ಮೂಲಕ ಸುಧಾರಿತರಾಗಿದ್ದು, ಮನುಷ್ಯ ಮನುಷ್ಯರನ್ನು ಪ್ರೀತಿ ಮಾಡುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸೋಣ ಎಂದು ತಿಳಿಸಿದರು.
ಕರ್ನಾಟಕ ಮಡಿವಾಳ ಸಂಘಟನೆಗಳ ಒಕ್ಕೂಟ ರಾಜ್ಯ ಉಪಾಧ್ಯಕ್ಷ ಎಚ್.ಎಸ್ ಭಾನುಮತಿ ಅವರು ಮಾತನಾಡಿ, ನಮ್ಮ ದೇವರು ಬಿಚ್ಚುಗತ್ತಿಯ ಮಡಿವಾಳ ಮಾಚಿದೇವ ನಮ್ಮ ಕುಲ ಗುರು. ಅವರ ವಚನಗಳು ಲಭ್ಯವಿದೆ. ಉಡಿಯ ಲಿಂಗವ ಬಿಟ್ಟು, ಗುಡಿಯ ಲಿಂಗಕ್ಕೆ ಶರಣರೆಂಬ ಮತಿಬ್ರಷ್ಟರೇ ನಂಬೇನಯ್ಯ ಕಲಿ ದೇವರ ದೇವ, ಕರಸಲ ದೇವನಿದಂತೆ ಧರೆಯ ಮೇಲಿನ ಪ್ರತಿಷ್ಠೆ ಇರುವ ಈ ನರಕ ನಾಯಿಗಳನ್ನೆ ನಂಬೇನಯ್ಯ ಕಲಿ ದೇವರ ದೇವ ನಾವು ಮಾಡುವ ಕಾಯಕ ಕೆಲಸವನ್ನು ನಿಷ್ಠೆಯಿಂದ ಪ್ರೀತಿಯಿಂದ, ಪ್ರಾಮಾಣಿಕರಾಗಿ ಕಾಯಕಯೋಗಿಗಳಾಗಿ ಬಿಚ್ಚುಗತ್ತಿಯ ವೀರರಾಗಿ ತಮ್ಮ ಬಾಳನ್ನು ಸಾರ್ಥಕವಾಗಿ ಜೀವನ ನಡೆಸಿರುತ್ತಾರೆ ಎಂದರು.
ಅವರು ಎಷ್ಟೋ ನಿಷ್ಠೆಯಿಂದ ಇದ್ದರು ಅವರಲ್ಲಿ ವೀರತ್ವ ಇತ್ತು ಜನ ಮನ್ನಣೆ ಜನರದೊಂದಿಗೆ ಸಮಾಜದೊಂದಿಗೆ ಅವರ ಒಡನಾಟ ಇತ್ತು ಇಂತಹ ಗುಣಗಳನ್ನು ನಾವು ನೋಡಬೇಕು ಅದನ್ನು ಅಳವಡಿಸಿಕೊಳ್ಳಬೇಕು. ನಮ್ಮ ದೇವರು ಬಿಚ್ಚುಗತ್ತಿಯ ಮಡಿವಾಳ ಮಾಚಿದೇವ ಅವರು ಯಾವ ಕಾಯಕವೂ ಕೀಳಲ್ಲ ಪ್ರತಿಯೊಂದು ಕಾಯಕವೂ ಅದರದ್ದೇ ಆದಂತಹ ಬೆಲೆ ಹೊಂದಿರುತ್ತದೆ ಎಂದು ಹೇಳಿದರು.
ಜಿಲ್ಲಾ ಮಡಿವಾಳ ನೌಕರರ ಸಂಘ ಅಧ್ಯಕ್ಷ ಎಚ್.ಸಿ ಶಿವಪ್ಪ ಅವರು ಮಾತನಾಡಿ, ದೈವಸಂಭೂತ ಮಾಚಿದೇವ ಅವರು ವಿದ್ಯಾಭ್ಯಾಸದಲ್ಲಿ ಎಲ್ಲಾ ರೀತಿಯಲ್ಲಿಯೂ ಅವರು ಮುಂದೆ ಇದ್ದರು. ಸ್ವಾಭಿಮಾನದಿಂದ ನಾವು ಒಗ್ಗಟ್ಟಾಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಹಾಗೂ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ಪಡೆಯೋಣ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಸಮಾಜದ ಪರಿವರ್ತನೆ ದಿಕ್ಕುಗಳನ್ನು ತಿಳಿಯಬೇಕು. 12ನೇ ಶತಮಾನದಲ್ಲಿ ಅನುಭವ ಮಂಟಪ ಸಂಚಲನ ಮಾಡಿದೆ. ಅದು ಶ್ರೇಷ್ಠ ಕಾಲಘಟ್ಟ,ಬಸವಣ್ಣನವರ, ಅಲ್ಲಮ ಪ್ರಭು ಅವರ ಅತಿ ಬಹುದೊಡ್ಡ ಕ್ರಾಂತಿಯಿಂದ ಶೋಷಿತ ಸಮುದಾಯಕ್ಕೆ ಬೆನ್ನೆಲುಬು ಎಂದರು.
ವೃತ್ತಿಯನ್ನು ಅಗೌರವದಿಂದ ನೋಡಲಿಲ್ಲ, ಯಾವುದೆ ಕಾಯಕ ಹೀನಾವೃತ್ತಿಯಲ್ಲ ಶಿವಶರಣರುಬದ್ದತೆ ಉಳಿಸಿಕೊಂಡಿದ್ದರು. ವಸ್ತ್ರ ಮಾತ್ರ ಶುಭ್ರವಾಗಿರಬೇಕು ಎನ್ನುವುದಲ್ಲ, ವ್ಯಕ್ತಿಯ ಮನಸ್ಸು ಅಷ್ಟೇ ಶುದ್ಧವಾಗಿರಬೇಕು ಎಂದು ತಿಳಿಯಬೇಕು. ನಮ್ಮ ವೃತ್ತಿಯನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಮಡಿವಾಳ ಮಾಚಿದೇವರು ವಚನಗಳನ್ನು ಬಹಳ ಶ್ರೇಷ್ಠತೆಯಿಂದ ಕಾಪಿಟ್ಟು ಉಳಿಸಿ ಕೊಟ್ಟಿರುತ್ತಾರೆ. ಅದನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳರ ಮಹಿಳಾ ಸಂಘ ಅಧ್ಯಕ್ಷ ಎನ್.ಆರ್.ವಿಜಯಲಕ್ಷ್ಮಿಅಂಜನಪ್ಪ, ತಾಲ್ಲೂಕು ಮಡಿವಾಳ ಸಂಘ ಅಧ್ಯಕ್ಷ ಎಸ್.ಗೋವಿಂದಪ್ಪ, ಸ್ವತಂತ್ರ ಹೋರಾಟಗಾ ಎಚ್.ಎಂ. ಶಿವಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್ ಪಿತಾರನಾಥ್ ಮತ್ತಿತರರು ಉಪಸ್ಥಿತರಿದ್ದರು.