ಜಿಲ್ಲೆ

ಮಡಿವಾಳ ಮಾಚಿದೇವ ಜಯಂತ್ಯುತ್ಸವ ಫೆ.1ಕ್ಕೆ

ದಾವಣಗೆರೆ: ವಿನೋಬನಗರದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಫೆ.1 ರಂದು ಬೆಳಗ್ಗೆ 11-30ಕ್ಕೆ ಶ್ರೀ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಡೆಯಲಿದೆ ಎಂದು ಜಿಲ್ಲಾ ಮಡಿವಾಳರ ಸಂಘದ ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ, ದಾವಣಗೆರೆ ಜಿಲ್ಲಾ ಮಡಿವಾಳರ ಸಂಘ, ಮಡಿವಾಳ ನೌಕರರ ಸಂಘ, ಮಡಿಕಟ್ಟೆ ವೃತ್ತಿ ನಿರತರ ಸಂಘ ಹಾಗೂ ಮಲ್ಲಿಗೆಮ್ಮ ಮಹಿಳಾ ಸ್ವಸಹಾಯ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು, ಸಂಸದ ಜಿ.ಎಂ.ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ಉಪನ್ಯಾಸಕ ಪ್ರೊ.ತೇಜಪ್ಪ ಮಡಿವಾಳರ ಮಾಚಿದೇವರ ಕುರಿತು ವಿಶೇಷ ಉಪನ್ಯಾಸ ನೀಡುವರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿ ಖಂಡೋಜಿರಾವ್, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಬಿ,ಜಿ.ಅಜಯಕುಮಾರ್, ಕೆ. ಪ್ರಸನ್ನಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನ ವಿಜೇತ ಪಟುಗಳಾದ ಎಸ್.ಹರ್ಷಕುಮಾರ್, ಎಂ.ಕಿರಣ್ ಇವರನ್ನು ಸನ್ಮಾನಿಸಲಾಗುವುದು ಎಂದರು.

ಪ್ರೊ.ಅನ್ನಪೂರ್ಣಮ್ಮ ನೀಡಿದ ವರದಿ ಆಧರಿಸಿ ರಾಜ್ಯ ಸರ್ಕಾರ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಇಲ್ಲವೇ ಸಮಾಜಕ್ಕೆ ಮೀಸಲು ನೀಡಲು ಒತ್ತಡಗಳಿದ್ದರೆ ನಾಯಕ ಜನಾಂಗಕ್ಕೆ ನೀಡಿದ ಮಾದರಿಯಲ್ಲೇ ಮಡಿವಾಳ ಸಮಾಜಕ್ಕೆ ಪ್ರತ್ಯೇಕವಾಗಿ ಶೇ.5 ಮೀಸಲು ನೀಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ಎಂ. ವಿಜಯಕುಮಾರ್, ಅಂಜಿನಪ್ಪ ರುದ್ರೇಶ್, ಕಿಶೋರ್‌ಕುಮಾರ್, ಬಾತಿ ಶಂಕರ್, ಎಂ.ಡಿ. ಹನುಮಂತಪ್ಪ ಇತರರಿದ್ದರು.

---