ಜಿಲ್ಲೆ

ಮಡಿಕೇರಿ ತುಂಬಾ ಕಾಫಿಯ ಘಮಲು

ಮಡಿಕೇರಿ:

ಮಡಿಕೇರಿ ಗಾಂಧಿ ಮೈದಾನದ ತುಂಬಾ ಬುಧವಾರ ಕಾಫಿಯದ್ದೇ ಘಮ ಘಮ... ಕಾಫಿಯದ್ದೇ ಚರ್ಚೆ...ಕಾಫಿಯದ್ದೇ ನೋಟ. ಮಡಿಕೇರಿ ದಸರಾ ಅಂಗವಾಗಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ 2ನೇ ವರ್ಷದ ಕಾಫಿ ದಸರಾ ಈ ವರ್ಷವೂ ಕಾಫಿ ಬೆಳೆಗಾರರು ಮತ್ತು ಕೃಷಿ ಆಸಕ್ತರನ್ನು ಸೆಳೆಯುವಲ್ಲಿ ಸಫಲವಾಯಿತು.

ಏಕತಾನತೆಯಿಂದ ಕೂಡಿರುತ್ತಿದ್ದ ಮಡಿಕೇರಿ ದಸರಾಕ್ಕೆ ಮತ್ತಷ್ಟು ಹುರುಪು ತುಂಬುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಕಾಫಿ ದಸರಾ ಆರಂಭಿಸಲಾಗಿದೆ. ಮಡಿಕೇರಿ ದಸರಾದಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಪ್ರಸ್ತಾಪವೇ ಇಲ್ಲದಿದ್ದ ಕಾಫಿ ದಸರಾ ಎನ್ನುವ ಪರಿಕಲ್ಪನೆ ಕಳೆದ ವರ್ಷದ ದಸರಾ ಸಿದ್ಧತಾ ಸಭೆಯ ವೇಳೆ ಮುನ್ನಲೆಗೆ ಬಂತು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ 'ಕಾಫಿ ದಸರಾ' ಪರಿಕಲ್ಪನೆ ಹಂಚಿಕೊAಡಿದ್ದರು. ಕಾಫಿಗೆ ಹೆಸರು ಮಾಡಿರುವ ಕೊಡಗಿನಲ್ಲಿ ಕಾಫಿ ದಸರಾ ಆಚರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವ ಅವರ ಚಿಂತನೆಗೆ ಪೂರಕವಾಗಿ ಶುರುವಾದ ಕಾಫಿ ದಸರಾದ ಯಶಸ್ಸು ಸಂಘಟಕರ ಶ್ರಮವನ್ನು ಸಾರ್ಥಕಗೊಳಿಸಿದೆ.

ಕಳೆದ ವರ್ಷ ವಿವಿಧ ಬಗೆಯ 34 ಮಳಿಗೆಗಳನ್ನು 'ಕಾಫಿ ದಸರಾ' ಹಿನ್ನೆಲೆಯಲ್ಲಿ ಗಾಂಧಿ ಮೈದಾನದಲ್ಲಿ ತೆರೆಯಲಾಗಿತ್ತು. ಈ ವರ್ಷ ಈ ಸಂಖ್ಯೆ 45ಕ್ಕೆ ಏರಿದೆ. ಕಾಫಿ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕಾ ಬೆಳೆಗಳು, ಯಂತ್ರೋಪಕರಣ, ಕಾಫಿ ಸ್ಟಾರ್ಟಪ್, ಕೆಫೆ ಸೇರಿದಂತೆ ಹಲವು ವೈವಿಧ್ಯಮಯ ಮಳಿಗೆಗಳು ಆಸಕ್ತರನ್ನು ತಮ್ಮತ್ತ ಸೆಳೆದವು. ಒಂದೆಡೆ ವಿಷಯ ಪರಿಣಿತರು ವಿವಿಧ ವಿಷಯಗಳ ಬಗ್ಗೆ ತಮ್ಮ ವಿಚಾರ ಮಂಡಿಸುತ್ತಿದ್ದರೆ ಮತ್ತೊಂದಡೆ ಅದಕ್ಕೆ ಕಿವಿಯಾಗುತ್ತಲೇ ಮಳಿಗೆಗಳಲ್ಲಿ ಅಡ್ಡಾಡಿ ಮಾಹಿತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.

ಕಾಫಿ ದಸರಾ ಕಾಫಿ ಬೆಳೆಗಾರರಿಗೆ ಉಪಯುಕ್ತ ಆಗಬೇಕು ಎನ್ನುವ ಉದ್ದೇಶದಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಭಾರತೀಯ ಕಾಫಿ ಮಂಡಳಿ ಗುಣಮಟ್ಟ ವಿಭಾಗದ ನಿರ್ದೇಶಕ ಡಾ. ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ಎನ್ನುವ ವಿಚಾರದಲ್ಲಿ, ಸಕಲೇಶಪುರದ ಪ್ರಗತಿಪರ ಕೃಷಿಕ ಕರಣ್ ಅವರು ಕಾಫಿ ಕೃಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ, ಕುಶಾಲನಗರದ ಪ್ರಗತಿ ಪರ ಕೃಷಿಕ ಜೆರ್ಮಿ ಡಿಸೋಜಾ ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ, ಪಶುವೈದ್ಯ ಇಲಾಖೆಯ ಪಾಲಿ ಕ್ಲಿನಿಕ್ ಆಸ್ಪತ್ರೆಗಳ ಸಹಾಯಕ ನಿರ್ದೇಶಕ ಡಾ. ಚೇಂದ್ರಿಮಾಡ ಕ್ಯಾ. ತಿಮ್ಮಯ್ಯ ಕಾಫಿ ಕೃಷಿಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರ ವಿಷಯ ಮಂಡನೆ ನಂತರವೂ ಸಭಿಕರಿಗೆ ಸಂವಾದದ ಅವಕಾಶ ಮಾಡಿಕೊಡಲಾಗಿತ್ತು.

ಕಾಫಿ ದಸರಾದಲ್ಲಿ ಜಿಲ್ಲೆಯ 10 ಸಾಧಕ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ, ಕಿರಗಂದೂರು ಗ್ರಾಮದ ಹಿರಿಯ ಕೃಷಿಕ ಎಸ್.ಎಂ. ಚಂಗಪ್ಪ, ಪ್ರಗತಿಪರ ಬೆಳೆಗಾರ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಸಾಧಕ ಕೃಷಿಕ ಬಿ.ಪಿ. ರವಿಶಂಕರ್, ಕೊಡ್ಲಿಪೇಟೆಯ ಕಾಫಿ ನರ್ಸರಿ ಮಾಲೀಕ ಡಿ.ವೈ. ರಜಾಕ್, ಹಿರಿಯ ಕಾಫಿ ಉದ್ಯಮಿ ಮಡಿಕೇರಿಯ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಕುಂದ ಗ್ರಾಮದ ಪ್ರಗತಿ ಪರ ಕೃಷಿಕ ಕೊಡಂದೇರ ನರೇನ್ ಕುಟ್ಟಯ್ಯ, ಚೆಟ್ಟಳ್ಳಿ ಪೊನ್ನತ್ತ ಮೊಟ್ಟೆಯ ಮಿಶ್ರಬೆಳೆ ಕೃಷಿಕ ರಾಬರ್ಟ್, ಮಸಗೋಡು ಗ್ರಾಮದ ಪ್ರಗತಿ ಪರ ಕೃಷಿಕ ಶ್ರೀ ವಿಕ್ರಂ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪರ್ಧೆಯೂ ಈ ಬಾರಿ ಗಮನ ಸೆಳೆಯಿತು. ಕಾಫಿ ಫ್ಲೆವರ್ ಕೇಕ್, ಕಾಫಿ ಫ್ಲೆವರ್ ಕಪ್ ಕೇಕ್, ಕಾಫಿ ಫ್ಲೆವರ್ ಬ್ರೌನಿ, ಕಾಫಿ ಫ್ಲೆವರ್ ಬಿಸ್ಕತ್, ಕಾಫಿ ಫ್ಲೆವರ್ ಫುಡ್ಡಿಂಗ್, ವಿಭಿನ್ನ ರುಚಿಯಿರುವ ಕಾಫಿ ಪಾನೀಯ, ಕಾಫಿ ಫ್ಲೇವರ್ ಚಾಕಲೇಟ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾಫಿ ದಸರಾದಲ್ಲಿ ಮೀನುಗಾರಿಕೆ ಇಲಾಖೆಯಿಂದ ಹಾಕಲಾಗಿದ್ದ ಮುತ್ತು ಕೃಷಿಗೆ ಸಂಬAಧಿಸಿದAತೆ ಮಾಹಿತಿ ಕೊಡುವ ಮಳಿಗೆ ಹೆಚ್ಚಿನವರನ್ನು ತನ್ನತ್ತ ಆಕರ್ಷಿಸಿತು. ಚಿಪ್ಪಿನೊಳಗೆ ಕುಳಿತು ಫೊಟೋ ತೆಗೆಯಲು ಅವಕಾಶ ಮಾಡಿಕೊಡುವ ಸೆಲ್ಪಿ ಪಾಯಿಂಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು, ಮಹಿಳೆಯರು ಸೆಲ್ಫಿ ತೆಗೆಯಿಸಿಕೊಂಡು ಸಂಭ್ರಮಿಸಿದರು. ಕೊಡಗಿನಲ್ಲಿ ಸಿಹಿನೀರಿನಲ್ಲಿ ಮುತ್ತು ಕೃಷಿ ಮಾಡಲು ಸಾಕಷ್ಟು ಅನುಕೂಲಗಳಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ರೈತರು ಈ ಕೃಷಿಯಲ್ಲಿ ತೊಡಗಿ ಲಾಭ ಗಳಿಸುತ್ತಿದ್ದಾರೆ. ಕೊಡಗಿನ ವಾತಾವರಣ ಮುತ್ತು ಕೃಷಿಗೆ ಪೂರಕವಾಗಿದೆ. ಸಣ್ಣ ಸಣ್ಣ ಟ್ರೇಗಳು ಇದ್ದರೂ ಈ ಕೃಷಿಯನ್ನು ಪ್ರಾರಂಭಿಸಬಹುದು. ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆ ಇದ್ದಲ್ಲಿ, ಕೃತಕ ಟ್ಯಾಂಕ್ ನಿರ್ಮಾಣ ಮಾಡಬಹುದು. ಕೃಷಿ ಹೊಂಡ, ಕೆರೆ ಕೂಡ ಮುತ್ತು ಕೃಷಿಗೆ ಯೋಗ್ಯ.. ಈ ಎಲ್ಲಾ ಮಾಹಿತಿಗಳನ್ನು ಮಳಿಗೆಯಲ್ಲಿ ನೀಡಲಾಗುತ್ತಿತ್ತು.

ಕಾಫಿ ದಸರಾದಲ್ಲಿ ನಮ್ಮ ಇಲಾಖೆಯಿಂದ ಮುತ್ತು ಕೃಷಿಗೆ ಸಂಬAಧಿಸಿದ ಮಳಿಗೆ ತೆರೆಯಲಾಗಿದೆ. ಬಹಳಷ್ಟು ಆಸಕ್ತರು ಈ ಬಗ್ಗೆ ಮಾಹಿತಿ ಪಡೆದುಕೊಂಡರು. ಮೀನುಗಾರಿಕೆ ಇಲಾಖೆ ವತಿಯಿಂದ ಈಗಾಗಲೇ ಎರಡು ಬ್ಯಾಚ್‌ಗೆ ಟ್ರೈನಿಂಗ್ ಕೊಡಲಾಗಿದೆ. ಸದ್ಯದಲ್ಲೇ ಅವರು ಈ ಕೃಷಿಯಲ್ಲಿ ತಮ್ಮನನ್ನು ತೊಡಗಿಸಿಕೊಳ್ಳಲಿದ್ದಾರೆ. ಮುತ್ತು ಕೃಷಿಯನ್ನು ಸರಿಯಾದ ರೀತಿ ಮಾಡಿದರೆ ಲಾಭದಾಯಕ.

ಮಿಲನಾ ಕೆ. ಭರತ್, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ

ನಮ್ಮಲ್ಲಿ ಯಾವುದನ್ನೇ ಆದರೂ ಜನ ಅಷ್ಟು ಬೇಗ ಸ್ವೀಕರಿಸುವುದಿಲ್ಲ. ಕಾಫಿ ದಸರಾದಲ್ಲಿ ಕಳೆದ ವರ್ಷ ಪಾಲ್ಗೊಂಡಿದ್ದ ಬೆಳೆಗಾರರ ಸಂಖ್ಯೆ ಕಡಿಮೆ ಇತ್ತು. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಕಾಫಿ ದಸರಾದ ಸಂಭ್ರಮ ಇನ್ನಷ್ಟು ಹೆಚ್ಚಾಗಬೇಕು. ಇದಕ್ಕೆ ಅರ್ಧ ಅಥವಾ ಒಂದು ದಿನದ ಕಾರ್ಯಕ್ರಮ ಸಾಲುವುದಿಲ್ಲ. 2 ದಿನಗಳ ಕಾಲ ಕಾರ್ಯಕ್ರಮ ನಡೆಯುವಂತಾಗಬೇಕು.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ