ಸುಂಟಿಕೊಪ್ಪ: ಮಡಿಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್‌ಗೆ ಮತ ನೀಡಿ ಎಂದು ಜೆಡಿಎಸ್ ಆಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.
ಸುಂಟಿಕೊಪ್ಪದ ಬಸ್ ನಿಲ್ದಾಣದಲ್ಲಿ ಜಾತ್ಯತೀತ ಜನತಾದಳ ಭಾನುವಾರ ಆಯೋಜಿಸಿದ್ದ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಪ್ರಾದೇಶಿಕ ಪಕ್ಷದಿಂದ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ.
ದೇಶದಲ್ಲಿ ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಹಣ ಪಾವತಿಯಾಗುತ್ತಿದೆ. 2.35 ಲಕ್ಷ ರೂ. ಪ್ರತಿವರ್ಷ ತೆರಿಗೆ ಸಂದಾಯವಾದರೂ ಕೇಂದ್ರ ಸರ್ಕಾರ ಕನಿಷ್ಠ ಅದರ ಅರ್ಧದಷ್ಟು ಅನುದಾನ ರಾಜ್ಯಕ್ಕೆ ನೀಡುತ್ತಿಲ್ಲ. ಇದು ಮಲತಾಯಿ ಧೋರಣೆಯಾಗಿದೆ. ಕರ್ನಾಟಕದಲ್ಲಿ 2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕರಾದವರು 25 ವರ್ಷದಲ್ಲಿ ಜಿಲ್ಲೆಗೆ ಕನಿಷ್ಠ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಲ್ಪಿಸಲಾಗಲಿಲ್ಲ, ಬಡವರಿಗೆ ಸೂರು ನೀಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ಇದ್ದರೂ ಅರಕಲಗೂಡು ಕ್ಷೇತ್ರದ ನಿವಾಸಿಗೆ ಟಿಕೆಟ್ ನೀಡುತ್ತಿರುವುದು ಕಾಂಗ್ರೆಸ್‌ನ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಅರಕಲಗೋಡು ಕ್ಷೇತ್ರ ರಾಜ್ಯದಲ್ಲಿ ಅತಿ ಹಿಂದುಳಿದ ಕ್ಷೇತ್ರವಾಗಿದೆ. ಅಲ್ಲಿ ಅಭಿವೃಧ್ಧಿ ಮಾಡದವರು ಕೊಡಗಿಗೆ ಬಂದು ಏನು ಮಾಡಿಯಾರು? ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಜೆಡಿಎಸ್ ಪಕ್ಷದ ಕೆ.ಎಂ. ಗಣೇಶ್ ಮಾತನಾಡಿ, ಕಾಂಗ್ರೆಸ್-ಬಿಜೆಪಿ ಒಂದೇ ಮುಖದ ಎರಡು ನಾಣ್ಯಗಳು. ಕೊಡಗಿಗೆ 2018ರಲ್ಲಿ ಅತಿವೃಷ್ಟಿಯಾದಾಗ ಬಹಳಷ್ಟು ಜನರು ಮನೆ ಕಳೆದುಕೊಂಡರು. ಆಗ 1,400 ಮನೆಗಳನ್ನು ಸಂತ್ರಸ್ತರಿಗೆ ನೀಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಬಿಜೆಪಿ ಶೇ. 40ರಷ್ಟು ಕಮಿಷನ್ ಪಡೆದು ಸರ್ಕಾರ ನಡೆಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಮುಖಂಡರಾದ ಇಸಾಕ್ ಖಾನ್, ಕೆ.ಇ. ಕರೀಂ, ಮಹಿಳೆಯರು ಇದ್ದರು. ಅನಂತರ ನಾಪಂಡ ಮುತ್ತಪ್ಪ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.