ನಂದೇಶ್ವರ: ನಮ್ಮ ದೇಶ ವಿಶ್ವದಲ್ಲಿಯೇ ವೈವಿಧ್ಯಮಯವಾಗಿದೆ. ಶರಣರು, ಸಂತರು ಪಾದಸ್ಪರ್ಶ ಮಾಡಿದ ಈ ಭೂಮಿ ವಿಶ್ವದ ಜನರನ್ನೆ ತನ್ನಡೆಗೆ ಸಳೆಯುತ್ತಿದೆ. ಇಂತಹ ಹಿನ್ನೆಲೆಯುಳ್ಳ ದೇಶದಲ್ಲಿ ನಾವೆಲ್ಲರೂ ಜನಸಿರುವುದು ನಮ್ಮ ಸೌಭಾಗ್ಯ. ಇಂದಿನ ದಿನಗಳಲ್ಲಿ ಎಲ್ಲ ಮಠಗಳ ಮಠಾಧೀಶರು ಭಾವೈಕ್ಯತೆ ಉಳಿಸಿ, ಬೆಳೆಸಲು ಶ್ರಮಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಲ್.ಪಾಟೀಲ ಹೇಳಿದರು.
ಸಮೀಪದ ಸವದಿ ಗ್ರಾಮದ ಲಿಂ. ಸಂಗನಬಸವ ಶಿವಯೋಗಿಗಳ 80ನೇ ಸ್ಮರಣೋತ್ಸವ ಹಾಗೂ ಡಾ. ಮಹಾಂತ ಶಿವಯೋಗಿಳ 4ನೇ ಸ್ಮರಣೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಲು ಮುಖ್ಯ ಕಾರಣ ಡಾ. ಮಹಾಂತಪ್ಪಗಳು. ಅವರ ಪ್ರತಿಯೊಂದು ಕಾರ್ಯಗಳು ಇತಿಹಾಸದಲ್ಲಿ ಮೈಲುಗಲ್ಲುಗಳಾಗಿ ಶಾಶ್ವತ ಉಳಿದಿವೆ. ಸತ್ಯ ಯಾವಾಗಲು ಕಹಿಯಾಗಿರುತ್ತದೆ. ಆದರೆ ಸತ್ಯಕ್ಕೆ ಒಂದು ದಿನ ಬೆಲೆ ಬಂದೇ ಬರುತ್ತದೆ ಎಂದರು.
ಶರಣ ಸಾಹಿತಿ ಸಿದ್ದಣ್ಣ ಲಂಗೋಟಿ ಮಾತನಾಡಿ, ‘ನೀನು ಬದುಕು ಇತರರಿಗೂ ಬದಕಲು ಬಿಡು’ ಎಂಬುದು ಬಸವ ತತ್ತ್ವದ ಮೂಲ ಉದ್ದೇಶವಾಗಿದೆ. ಈಗಾಗಲೇ ದೇಶದ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ಭಾಷಾಂತರವಾಗಿದೆ. ವಿದೇಶದ 10 ಭಾಷೆಗಳಲ್ಲಿ ವಚನ ಸಾಹಿತ್ಯ ಶೀಘ್ರದಲ್ಲಿ ಪ್ರಕಟವಾಗಲಿದೆ. ವಚನ ಸಾಹಿತ್ಯ ಅಧ್ಯಯನದಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ಹೇಳಿದರು.
ಐ.ಆರ್. ಮಠಪತಿ ಅವರಿಗೆ ರಾಜ್ಯಮಟ್ಟದ ಡಾ. ಮಹಾಂತಶ್ರೀ ಪ್ರಶಸ್ತಿ ನೀಡಲಾಯಿತು. ಡಾ. ಮಹಾಂತ ಶಿವಯೋಗಿಗಳ ಕುರಿತಾದ ಗ್ರಂಥ ಬಿಡುಗಡೆ ಮಾಡಲಾಯಿತು.
ಜಮಖಂಡಿ ಓಲೆಮಠದ ಡಾ. ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸವದಿ-ಇಳಕಲ್ ಮಠದ ಗುರು ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಡಾ. ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಸಂಗಮೇಶ್ವರ ದೇವರು, ಗುರು ಬಸವ ದೇವರು, ಸಂಗನಗೌಡ ಪಾಟೀಲ, ಸಂತೋಷ ನಿಡೋಣಿ, ರಾಚುಗೌಡ ಪಾಟೀಲ, ತಮ್ಮಣಪ್ಪ ರಬಕವಿ ಇತರರು ಇದ್ದರು.