ಜಿಲ್ಲೆ

ಮಠಮಾನ್ಯಗಳಿಂದ ಶೈಕ್ಷಣಿಕ ಪ್ರಗತಿ

ಕಾನಹೊಸಹಳ್ಳಿ: ಪ್ರಾಚೀನ ಧಾರ್ಮಿಕ ಚಿಂತನೆ ಮತ್ತು ಪರಂಪರೆ ಅವಲೋಕನ ಮಾಡಿದರೆ ಜಗತ್ತಿನಲ್ಲಿ ಭಾರತ ಸಾಂಸ್ಕೃತಿಕವಾಗಿ ಶ್ರೀಮಂತವಾದ ದೇಶವೆಂದು ಅರ್ಥ ಮಾಡಿಕೊಳ್ಳಬಹುದು ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಎಂ.ಬಿ.ಅಯ್ಯನಹಳ್ಳಿ ಗ್ರಾಮದಲ್ಲಿ ಕರಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ, ಅಂಜನೇಯ ದೇವಾಲಯದ ಗೋಪುರ ಕಲಶಾರೋಹಣ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಂಗಳವಾರ ಅಶೀರ್ವಚನ ನೀಡಿದರು. ನಾಡಿನ ಮಠಮಾನ್ಯಗಳು ಕೇವಲ ಧಾರ್ಮಿಕ ಚಿಂತನೆ ಮಾಡುತ್ತಿಲ್ಲ. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣದ ಪ್ರಗತಿಗೆ ಕೈಜೋಡಿಸಿವೆ ಎಂದರು.

ನೂರಾರು ವರ್ಷಗಳಿಂದ ಅನೇಕ ಮಠಗಳು ನಿರ್ಗತಿಕ, ಬಡ ಮಕ್ಕಳಿಗೆ ಉಚಿತ ಅನ್ನ, ಶಿಕ್ಷಣ ನೀಡುತ್ತಾ ಬಂದಿವೆ. ಉತ್ತಮ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು. ಹೆತ್ತವರನ್ನು ಗೌರವಿಸುವ ಗುಣ ಮೈಗೂಡಿಸಿಕೊಳ್ಳವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. 22 ವರ್ಷಗಳ ನಂತರ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಆಯೋಜಿಸಿದ್ದು ಸಂತಸ ತಂದಿದೆ ಎಂದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಧಾರ್ಮಿಕ ನಂಬಿಕೆ, ಆಚಾರ-ವಿಚಾರಗಳಲ್ಲಿ ವೈಜ್ಞಾನಿಕ ಚಿಂತನೆಗಳಿದ್ದು, ಗುರುಹಿರಿಯರು ಹೇಳುವ ಮಾತುಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ನೀಡಬೇಕೆಂದರು. ಸಂಡೂರು ಶಾಸಕಿ ಅನ್ನಪೂರ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಹೊಸಮನೆ ಚಿದಾನಂದಪ್ಪ, ಜಿಂಕಲ್ ನಾಗಮಣಿ, ಗುರುಸಿದ್ದನಗೌಡ, ಸಾಹಿತಿ ಎನ್.ಎಂ.ರವಿಕುಮಾರ್, ಮಾಲತಿನಾಯಕ್ ಇದ್ದರು.