ಚಾಮರಾಜನಗರ: ಪ್ರಸ್ತುತ ಸಮಾಜದಲ್ಲಿ ಜಾತಿ-ಜಾತಿಗಳನ್ನು ಒಡೆಯುವ ಕೆಲಸ ವಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಅಶಾಂತಿ ತಲೆ ದೋರುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಸಾಮರಸ್ಯ ನೆಲೆಸಬೇಕಾದರೇ ಮಠಮಾನ್ಯಗಳ ಮಾರ್ಗದರ್ಶನ ಅತ್ಯಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ್ ಎಸ್.ಶೆಟ್ಟರ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮೂಹ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸುತ್ತೂರು ಮಠದ ಡಾ.ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿ ಅವರ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಸುತ್ತೂರುಮಠ ಕೇವಲ ಧಾರ್ಮಿಕವಾಗಿ ಅಲ್ಲದೇ ಶೈಕ್ಷಣಿಕವಾಗಿ ದೊಡ್ಡಕ್ರಾಂತಿ ಮಾಡಿದೆ. ರಾಜೇಂದ್ರ ಶ್ರೀಗಳ ಹಲವಾರು ವರ್ಷಗಳ ತಪಸ್ಸಿನ ಫಲವಾಗಿ ಭಾರತವಲ್ಲದೇ ವಿದೇಶಗಳಲ್ಲಿ ಜೆಎಸ್‌ಎಸ್ ಸಂಸ್ಥೆ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಕಾಯಕವೇ ಪೂಜ್ಯರ ಸೇವೆ ಎಂಬ ರಾಜೇಂದ್ರ ಶ್ರೀಗಳ ಮಾತಿನಂತೆ ಇಂದಿನ ಶ್ರೀಗಳು ಜೆಎಸ್‌ಎಸ್ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಕಾರುಣ್ಯ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಜಾತಿ ಸಂಘರ್ಷದ ಬೇಗುದಿಯಲ್ಲಿ ಬೇಯುತ್ತಿರುವ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಮಠಾಧೀಶರ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯವಾಗಿದೆ ಎಂದರು.
ನಗರದ ಜೆಎಸ್‌ಎಸ್ ಕಾಲೇಜು ಕಟ್ಟಡ ಉದ್ಘಾಟನೆಗೆ 2012 ರಲ್ಲಿ ನಾನು ಚಾಮರಾಜನಗರಕ್ಕೆ ಬಂದಿದ್ದೆ. ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂದು ಹೇಳಿದರು. ನಾನು ಯಾವುದನ್ನೂ ಕೇಳದೇ ಮೂರು ಬಾರಿ ಚಾಮರಾಜ ನಗರಕ್ಕೆ ಬಂದಿದ್ದೆ. ನಾನು ಬಸವಣ್ಣನವರ ಅನುಯಾಯಿಯಾಗಿದ್ದು, ಮೂಢನಂಬಿಕೆಗೆ ಜೋತು ಬೀಳಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ನಗರಸಭೆ ಅಧ್ಯಕ್ಷ ಸುರೇಶ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆ ಸದಸ್ಯೆ ಕುಮುದಾ ಕೇಶವಮೂರ್ತಿ, ಸಾಹಿತಿ ಪ್ರೊ.ಎಂ.ಕೃಷ್ಣಗೌಡ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ:
ರಾಜೇಂದ್ರ ಶ್ರೀಗಳು ನಾಗರೀಕ ಸೌಲಭ್ಯ ಇಲ್ಲದ ಕಾಲದಲ್ಲಿ ಶಿಕ್ಷಣ ಸಂಸ್ಥೆ ಜತೆಗೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ಆರಂಭಿಸುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಲಹೆ ನೀಡಿದರು. ನಾಡಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ತರಳವಾಳು ಮಠ ಸೇರಿದಂತೆ ಅನೇಕ ಮಠಗಳು ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸಿವೆ. ಅವುಗಳ ಸಾಲಿನಲ್ಲಿ ಸುತ್ತೂರು ಮಠವು ಒಂದಾಗಿದ್ದು, ಪ್ರತಿಯೊಬ್ಬರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಾಧನೆ ಮಾಡಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ರಾಜೇಂದ್ರ ಶ್ರೀಗಳು ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು. ಜೆಎಸ್‌ಎಸ್ ಸಂಸ್ಥೆ ದೇಶ ವಿದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೋಟ್ಯಾಂತರ ವಿದ್ಯಾರ್ಥಿಗಳು ತಮ್ಮ ಕನಸು ನನಸು ಮಾಡಿಕೊಂಡು ಉತ್ತಮ ಜೀವನ ಮಾಡುತ್ತಿದ್ದಾರೆ. ಪಾಲಕರ ಕನಸು ನನಸು ಮಾಡಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದರು.
ಭವ್ಯ ಮೆರವಣಿಗೆ ಮತ್ತು ರಕ್ತದಾನ:
ಡಾ.ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರ ಶತೋತ್ತರ ದಶಮಾನೋತ್ಸವದ ಅಂಗವಾಗಿ ಶ್ರೀಗಳವರ ಭಾವಚಿತ್ರ ಮೆರವಣಿಗೆ ನಡೆಯಿತು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ಮೆರವಣಿಗೆ ಶ್ರೀಭುವನೇಶ್ವರಿವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಸಾಗಿ ಕಾರ್ಯಕ್ರಮ ನಡೆದ ಜೆಎಸ್‌ಎಸ್ ಕಾಲೇಜಿನಲ್ಲಿ ಅಂತ್ಯವಾಯಿತು. ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ ಕುಣಿತ ಹಾಗೂ ಇನ್ನಿತರೆ ಕಲಾತಂಡಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪ್ರೌಢಶಾಲಾ ವಿಭಾಗದ ದಿವ್ಯಶ್ರೀ, ಬಸವಣ್ಣ, ಹರ್ಷಿತಾ, ಶಿಲ್ಪಾ, ಅಮೃತಾ, ಮಹಾಲಕ್ಷ್ಮಿ, ನಿಶಾ ಫಾತಿಮಾ ಸೇರಿದಂತೆ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಹಲವು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು ಹಾಗೂ ರಕ್ತದಾನಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಸಮಾಜವನ್ನು ತಿದ್ದಲು ಶಿಕ್ಷಣದಿಂದಲೇ ಸಾಧ್ಯ ಎಂದುವುದನ್ನು ಅರಿತ್ತಿದ್ದ ರಾಜೇಂದ್ರ ಶ್ರೀಗಳು 1954ರಲ್ಲಿ ಸುತ್ತೂರು ಸಂಸ್ಥಾನವನ್ನು ನಿರ್ಮಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. ಸ್ವಾಮೀಜಿಯವರ ದೂರದೃಷ್ಟಿಯಿಂದ ವಿದ್ಯಾರ್ಥಿ ನಿಲಯಗಳು ಆರಂಭವಾದವು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ಜಿಲ್ಲೆಗೆ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ.
-ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾ.ನಗರ.
ಮಠಗಳನ್ನು ಮೀರಿ ಸಮಾಜಕ್ಕೆ ಸೇವೆ ಸಲ್ಲಿಸಬಹುದು, ಸಮ ಸಮಾಜವನ್ನು ನಿರ್ಮಿಸಬಹುದು ಎಂದು ರಾಜೇಂದ್ರ ಶ್ರೀಗಳು ತಿಳಿಸಿದ್ದಾರೆ. ಜೆಎಸ್‌ಎಸ್ ವಿದ್ಯಾಪೀಠದಲ್ಲಿ ಅನ್ನದಾಸೋಹದೊಂದಿಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
-ಸುನೀಲ್ ಬೋಸ್, ಸಂಸದ, ಚಾಮರಾಜನಗರ