ಜಿಲ್ಲೆ

ಮಠದಗುಡ್ಡೆ ಸಂತ್ರಸ್ತರಿಗೆ ಹಕ್ಕುಪತ್ರ

ಗುರುಪುರ: ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ ಜುಲೈ 5ರಂದು ಭೂಕುಸಿತ ಸಂಭವಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದ ಪ್ರದೇಶದ 48 ಕುಟುಂಬ ಹಾಗೂ ಅಡ್ಡೂರು ಗ್ರಾಮದ ಒಂದು ಕುಟುಂಬಕ್ಕೆ ಮಂಗಳವಾರ ಹಕ್ಕುಪತ್ರ ವಿತರಿಸಲಾಯಿತು.

ಶಾಸಕ ಡಾ.ವೈ ಭರತ್ ಶೆಟ್ಟಿ ಮಾತನಾಡಿ, ಶಾಸಕನಾದ ಬಳಿಕ ಕ್ಷೇತ್ರ ವ್ಯಾಪ್ತಿಯ ಸುಮಾರು 4 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಮಠದಗುಡ್ಡೆಯಲ್ಲಿ ಗುಡ್ಡ ಕುಸಿತ ಬಳಿಕ 70ಕ್ಕೂ ಹೆಚ್ಚು ಕುಟುಂಬಗಳು ಅತಂತ್ರಗೊಂಡಿತ್ತು. ಈ ಪೈಕಿ ಹೆಚ್ಚಿನವರಲ್ಲಿ ಹಕ್ಕುಪತ್ರವಿರಲಿಲ್ಲ. ಕಾನೂನು ತೊಡಕು ನಿವಾರಣೆಗಾಗಿ ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಿ, ಆರು ತಿಂಗಳೊಳಗೆ ಎಲ್ಲರಿಗೂ ಹಕ್ಕುಪತ್ರ ಸಿಗುವಂತೆ ಪ್ರಯತ್ನಿಸಿದ್ದೇನೆ ಎಂದರು.

ಗುರುಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಸದಸ್ಯರಾದ ರಾಜೇಶ್ ಸುವರ್ಣ, ಸಚಿನ್ ಅಡಪ ಹಾಗೂ ನಳಿನಿ ಶೆಟ್ಟಿ, ಕಂದಾಯ ನಿರೀಕ್ಷಕ ನವನೀತ್ ಮಾಳವ, ಬಿಜೆಪಿ ಮುಖಂಡ ಸೋಹನ್ ಅತಿಕಾರಿ, ಪಿಡಿಒ ಅಬೂಬಕ್ಕರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಾದ ದಿನೇಶ್, ಪವಿತ್ರಾ, ಜ್ಞಾನೇಶ್ವರಿ, ಯಮುನಪ್ಪ ಕೋರಿ, ಮೊಹಬೂನ್ ಸಾಬ್, ಬಿಜೆಪಿ ಪ್ರಮುಖರಾದ ಹರೀಶ್ ಬಳ್ಳಿ, ಸುನೀಲ್ ಕುಮಾರ್ ಜಲ್ಲಿಗುಡ್ಡೆ, ಶ್ರೀಕರ್ ಶೆಟ್ಟಿ, ಸುಧೀರ್ ಕಾಮತ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು. ಗುರುಪುರ ನಾಡಕಚೇರಿ ಉಪತಹಸೀಲ್ದಾರ್ ಶಿವಪ್ರಸಾದ್ ಸ್ವಾಗತಿಸಿದರು.

ಅಂತಂತ್ರ ಸ್ಥಿತಿಯಲ್ಲಿ ಸಂತ್ರಸ್ತರು: ಮಠದಗುಡ್ಡೆ ಗುಡ್ಡ ಕುಸಿತದಿಂದ ಸುಮಾರು 100 ಕುಟುಂಬಗಳು ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿತ್ತು. ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಿದೆ. ಉಳಿದಂತೆ 70 ಕುಟುಂಬಗಳಿಗೆ ಜಿಲ್ಲಾಡಳಿತ ತಲಾ 10 ಸಾವಿರ ರೂ. ಪರಿಹಾರ ನೀಡಿತ್ತು. ಕಳೆದ ನವಂಬರ್‌ನಲ್ಲಿ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ನಿರ್ವಸಿತರಿಗೆ ನೀಡಿದ ಭರವಸೆಯಂತೆ ಈವರೆಗೂ ತಿಂಗಳ ಬಾಡಿಗೆ ಮೊತ್ತ ಸಿಕ್ಕಿಲ್ಲ. ನಿರ್ವಸಿತರಿಗೆ ನಿವೇಶನ ಹಂಚಲು ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ನಾರ್ಲಪದವಿನಲ್ಲಿ ಗುರುತಿಸಲಾಗಿದೆ ಎನ್ನಲಾದ 1.5 ಎಕರೆ ಜಾಗದ ಕಾನೂನು ತೊಡಕು ಬಗೆಹರಿದಿಲ್ಲ. ಹಾಗಾಗಿ ಮನೆ ಕಳೆದುಕೊಂಡವರೆಲ್ಲ ಈಗಲೂ ನಿವೇಶನರಹಿತರಾಗಿ ಜೀವನ ಸಾಗಿಸುವಂತಾಗಿದೆ ಎಂದು ಕೆಲವರು ಶಾಸಕರಲ್ಲಿ ವಿಷಯ ನಿವೇದಿಸಿಕೊಂಡರು.

ಎನ್‌ಐಟಿಕೆ ವರದಿ ಮಾನ್ಯತೆ ಆಗ್ರಹ: ಗುಡ್ಡ ಕುಸಿದ ಸ್ಥಳದಲ್ಲಿ ಸಮೀಕ್ಷೆ ನಡೆಸಿದ್ದ ಸುರತ್ಕಲ್ ಎನ್‌ಐಟಿಕೆ ಭೂವಿಜ್ಞಾನ ವಿಭಾಗದ ತಜ್ಞರು ಮಠದಗುಡ್ಡೆಯ ಸುಮಾರು ಒಂದೂವರೆ ಕಿ.ಮೀ ಪ್ರದೇಶ ವಾಸ್ತವ್ಯಕ್ಕೆ ಯೋಗ್ಯವಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಆದರೆ ಬಾಡಿಗೆ ನೀಡಲು ಸಾಧ್ಯವಿಲ್ಲದ ಕೆಲವರು ಈಗಾಗಲೇ ತಮ್ಮ ಮನೆಗಳಿಗೆ ಮರಳಿದ್ದಾರೆ. ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಠದಗುಡ್ಡೆಗೆ ಸಂಬಂಧಿಸಿ ಎನ್‌ಐಟಿಕೆ ವರದಿಗೆ ಶೀಘ್ರ ಮಾನ್ಯತೆ ನೀಡಬೇಕು ಹಾಗೂ ಹಕ್ಕುಪತ್ರ ಪಡೆದವರಿಗೆ ಬೇರೆಡೆ ನಿವೇಶನ ಒದಗಿಸಬೇಕು ಎಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.