ಜಿಲ್ಲೆ

ಮಠಗಳು ಸರ್ವಧರ್ಮ ಸಹಿಷ್ಣುತೆಯ ಕೇಂದ್ರಗಳು

ಕೂಡ್ಲಿಗಿ: ವೀರಶೈವ ಧರ್ಮದ ಪಂಚಾಚಾರ್ಯ ಯುಗಪುರುಷರು ತತ್ವೋಪದೇಶ ಬೋಧಿಸುವ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸಮೃದ್ಧಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಕುಪ್ಪಿನಕೆರೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನೆ, ವೀರಭದ್ರೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬುಧವಾರ ಆಶೀರ್ವಚನ ನೀಡಿದರು. ವೀರಶೈವ ಮಠಗಳು ಜಾತಿ, ಮತಗಳ ಭೇದ ಮಾಡದೆ ಸರ್ವರಿಗೂ ಅನ್ನ, ಅಕ್ಷರ, ಆಶ್ರಯ ನೀಡಿವೆ. ಹಾಗಾಗಿ ಮಠಗಳು ಸರ್ವ ಧರ್ಮ ಸಹಿಷ್ಣುತೆಯ ಕೇಂದ್ರಗಳಾಗಿವೆ ಎಂದರು.

ಶ್ರೀ ವೀರಭದ್ರ ಎಲ್ಲರೂ ಆರಾಧಿಸುವ ದೇವರಾಗಿದ್ದಾನೆ. ಜಗತ್ತಿನಲ್ಲಿ ಅಧರ್ಮ ತಾಂಡವವಾಡುವಾಗ ದಕ್ಷ ಪ್ರಜಾಪತಿಯ ಯಜ್ಞಕುಂಡವನ್ನು ನಾಶಮಾಡುವುದರೊಂದಿಗೆ ಶಿರಚ್ಛೇದನ ಮಾಡಿದ ವೀರಭದ್ರ ಅವತಾರ ಪುರುಷನಾಗಿದ್ದಾನೆ. ವೀರಭದ್ರನು ಆಂಜನೇಯನಿಗೆ ಲಿಂಗಧಾರಣೆ ಮಾಡುವ ಸನ್ನಿವೇಶವನ್ನು ಪುರಾಣ ಗ್ರಂಥಗಳಿಂದ ತಿಳಿಯಬಹುದಾಗಿದೆ ಎಂದು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಮೂಲಕ ಶ್ರೀ ವೀರಭದ್ರನ ಮೂರ್ತಿಯನ್ನು ಶಿಲ್ಪಿ ಅರುಣ್ ಯೋಗಿರಾಜ ಅವರಿಂದ ನಿರ್ಮಿಸಿ ಪ್ರತಿಷ್ಠಾಪನೆ ಮಾಡುವ ಮೂಲಕ ಕುಪ್ಪಿನಕೇರಿ ಗ್ರಾಮಸ್ಥರ ಸಂಕಲ್ಪ ನೆರವೇರಿದೆ ಎಂದರು.

ಮಾಜಿ ಸಚಿವ ರಾಜಶೇಖರ ಬಿ.ಪಾಟೀಲ್ ಮಾತನಾಡಿ, ಪೀಠಗಳು ಮಾನವ ಧರ್ಮಕ್ಕೆ ಶ್ರೇಯಸ್ಸನ್ನು ಬಯಸುವ ಕೇಂದ್ರಗಳಾಗಿವೆ. ಸಂಸ್ಕಾರದೊಂದಿಗೆ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಮಠದ ಆಶ್ರಯದಲ್ಲಿ ನಡೆಯುವುದರಿಂದ ಅನೇಕರಿಗೆ ಬದುಕು ಕಟ್ಟಿಕೊಳ್ಳಲು ಆಧಾರವಾಗಿವೆ ಎಂದರು.

ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಮಾಳೆಹಳ್ಳಿ ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ, ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಉಜ್ಜಿನಿ ಜ್ಞಾನಗುರು ವಿದ್ಯಾಪೀಠದ ಖಜಾಂಚಿ ಸಿದ್ದೇಶ ಗೌಡ್ರು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಟಿ.ಜಿ. ಮಲ್ಲಿಕಾರ್ಜುನಗೌಡ, ಹಡಗಲಿ ವೀರಭದ್ರಪ್ಪ, ಗ್ರಾಪಂ ಸದಸ್ಯ ದುರುಗೇಶ, ಕೆ.ವೀರೇಶ, ಓಬಣ್ಣ ಇತರರಿದ್ದರು.