ಸೋಮವಾರಪೇಟೆ: ಮಠ ಮಾನ್ಯಗಳು ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳುವಂತೆ ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧ್ಯಕ್ಷ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
ವಿರಕ್ತಮಠ, ವೀರಶೈವ ಸಮಾಜ, ಅಕ್ಕನಬಳಗ ಹಾಗೂ ಬಸವೇಶ್ವರ ಯುವಕ ಸಂಘದ ಸಹಯೋಗ ದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಸ್ವಾಮೀಜಿ ಅವರ ಮೂರನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ದರು. ನೂರಾರು ವರ್ಷಗಳ ಇತಿಹಾಸವಿರುವ ಈ ವಿರಕ್ತಮಠದಲ್ಲಿ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವೀರಶೈವ ಸಮಾಜದ ಮುಖಂಡರು, ಕಳೆದ ಮೂರು ವರ್ಷಗಳಿಂದ ಮಠಕ್ಕೆ ಸ್ವಾಮೀಜಿ ಇಲ್ಲ, ಮಠದ ಕಟ್ಟಡ ಕೆಲವು ಭಾಗ ಕುಸಿಯುತ್ತಿದೆ, ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಮುಂದಿನ ಒಂದು ತಿಂಗಳೊಳಗೆ ಒಬ್ಬ ಸ್ವಾಮೀಜಿ ಯನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಸಮಾಜದ ವತಿಯಿಂದಲೇ ಸ್ವಾಮೀಜಿಯನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.
ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯಿಸಿ, ನಮ್ಮ ಎಲ್ಲ ಶಾಖಾಮಠದ ಸ್ವಾಮೀಜಿಗಳು ಹಾಗೂ ಚಿತ್ರದುರ್ಗ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಸ್ವಾಮೀಜಿಯನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು.
ರಾವಂದೂರು ಮಠಾಧೀಶರಾದ ಮೋಕ್ಷಪತಿ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ತೋಂಟ ದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಚಿಕ್ಕಬಳ್ಳಾಪುರದ ದೇಶಿಕೇಂದ್ರ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತಶಿವಲಿಂಗ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಇದ್ದರು.