ಹನೂರು: ದೇಗುಲ ಹಾಗೂ ಮಠಗಳು ಮಾನಸಿಕ ನೆಮ್ಮದಿ ತರುವ ಹಾಗೂ ಸಮಸ್ಯೆಗಳಿಗೆ ಮುಕ್ತಿ ಸಿಗುವ ತಾಣಗಳು. ಇದನ್ನು ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಗುರುಮಲ್ಲೇಶ್ವರ ಭಿಕ್ಷದ ಮಠದ ಸಭಾ ಭವನವನ್ನು ಶುಕ್ರವಾರ ಉದ್ಘಾಟಿಸಿ ನಂತರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೀಪ ಬೆಳಗಲು ಅಗತ್ಯವಿರುವಷ್ಟೇ ಎಣ್ಣೆ ಹಾಕಬೇಕು. ಹಾಗೆಯೇ ಸಮಾಜ ಹಾಗೂ ಧರ್ಮದ ಉನ್ನತಿಗೆ ಸೇವೆ ಅಗತ್ಯ. ಈ ದಿಸೆಯಲ್ಲಿ ಒಡೆಯರಪಾಳ್ಯ ಭಾಗದಲ್ಲಿ ಜನರು ಧರ್ಮಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಂಸ್ಕೃತಿ ಹಾಗೂ ಸಂಸ್ಕಾರದ ಬೆಳವಣಿಗೆಗೆ ಒಡೆಯರಾಗಿರುವುದು ಮೆಚ್ಚುಗೆಯ ಸಂಗತಿ ಎಂದು ಹೇಳಿದರು.
ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಬೇಕು. ಇದರಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ಇಲ್ಲಿ ಸಭಾ ಭವನವನ್ನು ನಿರ್ಮಿಸಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.
ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯಬೇಕಾದರೆ ಮನುಷ್ಯ ಬದುಕಿನಲ್ಲಿ ಸರಳತೆ ಪಾಲಿಸಬೇಕು. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಮಾನತೆ ಸಂಕಲ್ಪ ತೊಟ್ಟು ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಸಮಾಜದಲ್ಲಿ ಪರಸ್ಪರ ಅನ್ಯೋನ್ಯತೆ ಮೂಡುತ್ತದೆ. ಭಾರತೀಯ ಪರಂಪರೆ ವಿಶ್ವದಲ್ಲಿ ಶ್ರೇಷ್ಠತೆ ಪಡೆದಿದೆ. ಹೀಗಾಗಿ ಹಳ್ಳಿಗಳಲ್ಲಿ ಮೊದಲು ಧಾರ್ಮಿಕ ಪರಂಪರೆಯ ಬೆಳವಣಿಗೆಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಕಾಯಕವೇ ಕೈಲಾಸ ಎನ್ನುವ ಬಸವ ತತ್ವದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಮೆಚ್ಚುವಂತಹದ್ದು ಎಂದು ಹೇಳಿದರು.
ದೇವನೂರು ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಮೈಸೂರು ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಮುಖಂಡರಾದ ನಿಶಾಂತ್, ಪೊನ್ನಾಚಿ ಮಹದೇವಸ್ವಾಮಿ ಇತರರು ಇದ್ದರು.