ಅಕ್ಕಿಆಲೂರ: ಮಠ, ಲಿಂಗಪೂಜೆ ಸಂಪ್ರದಾಯಗಳ ಹೊರತಾಗಿ ಸಮಾಜ ಉದ್ಧರಿಸಬೇಕೆಂಬುದು ಹಾನಗಲ್ಲ ಕುಮಾರ ಶಿವಯೋಗಿಗಳ ಸಿದ್ಧಾಂತವಾಗಿತ್ತು. ಅದರ ನೆಲೆಗಟ್ಟಿನಲ್ಲಿ ಶಿವಯೋಗ ಮಂದಿರ ವಟುಗಳಿಗೆ ಸಂಸ್ಕಾರ ನೀಡುತ್ತಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಸ್ಥಳೀಯ ಚನ್ನವೀರೇಶ್ವರ ವಿರಕ್ತ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿವಬಸವ ಸ್ವಾಮೀಜಿ ಕೈಗೊಂಡಿದ್ದ ಮೌನಾನುಷ್ಠಾನ ಮಹಾಮಂಗಲದ ಧಾರ್ವಿುಕ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಠಗಳ ಮೂಲಕ ಗೋವು ರಕ್ಷಣೆ, ಶಿಕ್ಷಣಕ್ಕೆ ಒತ್ತು, ಜಾತಿ ವ್ಯವಸ್ಥೆ ನಿಮೂಲನೆ ಸೇರಿ ಅನೇಕ ಸಾಮಾಜಿಕ ಕಾರ್ಯಗಳಿಗೆ ನಾಡಿನ ವೀರಶೈವ ಲಿಂಗಾಯತ ಮಠಗಳು ಶ್ರಮಿಸುತ್ತಿವೆ ಎಂದರು.
ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸರ್ವ ಸಮಾಜದವರು ಮಠ-ಮಂದಿರಗಳ ಆಚರಣೆಗಳೊಂದಿಗೆ ಕೈಜೋಡಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದರು.
ಇದಕ್ಕೂ ಮೊದಲು ಶಿವಬಸವ ಸ್ವಾಮೀಜಿ ಅವರು ಲಿಂ. ಚನ್ನವೀರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಮೌನಾನುಷ್ಠಾನ ಸಂಪನ್ನ ಗೊಳಿಸಿದರು. ಮೂಲೆಗದ್ದೆಯ ಸದಾನಂದ ಶಿವಯೋಗಾ ಶ್ರಮದ ಅಭಿನವ ಚನ್ನಬಸವ ಶ್ರೀಗಳು, ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು, ವಿವಿಧ ಮಠಾಧೀಶರು, ವೇ. ಶಾಂತಯ್ಯಶಾಸ್ತ್ರೀ ಹಿರೇಮಠ, ವೇ. ಬಸಯ್ಯಶಾಸ್ತ್ರೀ ವಾಚದಮಠ ಉಪಸ್ಥಿತರಿದ್ದರು.