ಜಿಲ್ಲೆ

ಮಠಗಳ ಸಂಖ್ಯೆ ಇಳಿಮುಖ; ಆತಂಕದ ಸಂಗತಿ

ಗುಂಡ್ಲುಪೇಟೆ: ಜನರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದ ಮಠಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವುದು ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪಡಗೂರು ಅಡವಿ ಮಠದ ಪೀಠಾಧ್ಯಕ್ಷ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ವೀರಸಿಂಹಾಸನ ಶಿಲಾ ಮಠದ ಲಿಂಗೈಕ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮಿ ಅವರ 73ನೇ ಆರಾಧನಾ ಮಹೋತ್ಸವ ಮತ್ತು ಶ್ರೀ ಮಠದ ನೂತನ ಪಟ್ಟಾಧಿಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನಿಂದಲೂ ವೀರಶೈವ ಲಿಂಗಾಯತ ಮಠಗಳು ತಮ್ಮದೇ ಆದ ರೀತಿಯಲ್ಲಿ ಕಾಯಕ ಮಾಡಿಕೊಂಡು ಬಂದಿವೆ. ರಾಜ್ಯದಲ್ಲಿ 5 ಸಾವಿರದಷ್ಟಿದ್ದ ಮಠಗಳ ಸಂಖ್ಯೆ ನಾನಾ ಕಾರಣಗಳಿಂದ ಒಂದು ಸಾವಿರಕ್ಕೆ ಇಳಿದಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಠಗಳು ಶಾಲೆಗಳನ್ನು ತೆರೆದು ಶಿಕ್ಷಣ, ಅನ್ನ ದಾಸೋಹದೊಂದಿಗೆ ಜ್ಞಾನ ದಾಸೋಹ ಮಾಡಿಕೊಂಡು ಬಂದಿವೆ. ಜನರನ್ನು ಧರ್ಮ ಮಾರ್ಗದಲ್ಲಿ ನಡೆಸುವ ಕೆಲಸವನ್ನು ಮಾಡುತ್ತಿವೆ. ಆದರೆ, ಮಠಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಸೋಮಹಳ್ಳಿ ವೀರಸಿಂಹಾಸನ ಶೀಲಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಮಲ್ಲಸ್ವಾಮಿ ಅವರಿಂದ ಕೊಳ್ಳೇಗಾಲ ತಾಲೂಕಿನ ತೆರಂಬಳ್ಳಿ ಗ್ರಾಮದ ಅನಿತಾ ಮತ್ತು ತೋಂಟದಾರ್ಯಸ್ವಾಮಿ ದಂಪತಿ ಪುತ್ರ ಗಿರಿಜಾ ಶಂಕರ ಕೃಪಾ ಎಂಬ ವಟುವಿಗೆ ಬ್ರಹ್ಮೋಪದೇಶ ಮೂಲಕ ಶ್ರೀ ಮಠದ ನೂತನ ಪಟ್ಟಾಧಿಕಾರ ವಹಿಸಲಾಯಿತು. ನಂತರ ಗ್ರಾಮದಲ್ಲಿ ನೂತನ ಪಟ್ಟಾಧಿಕಾರಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸಕಲ ಗೌರವಗಳಿಂದ ಮೆರವಣಿಗೆ ಮಾಡಲಾಯಿತು.

ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ, ವಿವಿಧ ಮಠಗಳ ಶ್ರೀಗಳು, ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.