ಜಿಲ್ಲೆ

ಮಠ-ಭಕ್ತರ ನಡುವೆ ಅವಿನಾಭಾವ ಸಂಬಂಧ

ಗುಂಡ್ಲುಪೇಟೆ: ಮಠ ಮತ್ತು ಭಕ್ತರ ಅವಿನಾಭಾವ ಸಂಬಂಧ ತಾಲೂಕಿನಲ್ಲಿ ಅನನ್ಯವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾದಾಪಟ್ಟಣ ವಿರಕ್ತ ಮಠದಲ್ಲಿ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ ಶಿವಗಣಾರಾಧನೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.


ತಾಲೂಕಿನಲ್ಲಿ ಅತಿ ಹೆಚ್ಚಿನ ಮಠಗಳಿದ್ದು, ಭಕ್ತರ ನೆರವಿನಿಂದ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿವೆ. ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರು ಶ್ರೀಮಂತ- ಬಡವರೆಂಬ ಭೇದ-ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಲೌಕಿಕ ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿರ್ಲಿಪ್ತವಾಗಿ ಹಾಗೂ ಸರಳವಾಗಿ ಬದುಕಿದ್ದರು. ಪಿಟೀಲು, ಹಾರ್ಮೋನಿಯಂ ಸಂಗೀತದೊಂದಿಗೆ ವಚನ ಗಾಯನದಲ್ಲಿ ತನ್ಮಯರಾಗುತ್ತಿದ್ದ ಅವರು, ಸದಾ ಭಕ್ತರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಶ್ರೀಗಳು ಎಲ್ಲರನ್ನೂ ಸಮಾನವಾಗಿ ಕಂಡವರು. ನಮ್ಮನ್ನು ಅನೇಕ ಬಾರಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ ಎಂದು ಸ್ಮರಿಸಿದರು.


ಇದಕ್ಕೂ ಮುನ್ನ ಬೆಳಗ್ಗೆ ಸುತ್ತೂರು ಶೀಗಳ ನೇತೃತ್ವದಲ್ಲಿ ಸದಾಶಿವ ಸ್ವಾಮೀಜಿ ಅವರ ಗದ್ದುಗೆಗೆ ರುದ್ರಾಭಿಷೇಕ, ಲಿಂಗಪೂಜೆ ನೆರವೇರಿಸಲಾಯಿತು. 20 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ರಾತ್ರಿ ತಾಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದ ಕಲಾವಿದರಿಂದ ‘ಪ್ರಭುಲಿಂಗಲೀಲೆ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.


ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಪಡಗೂರು ಅಡವಿ ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ದೇವನೂರು ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಬೆಟ್ಟದಪುರದ ಶ್ರೀ ಚೆನ್ನಬಸವ ದೇಶಿಕೇಂದ್ರಸ್ವಾಮಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಾಂಗ್ರೆಸ್ ಗಣೇಶ್ ಪ್ರಸಾದ್, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕಬ್ಬಹಳ್ಳಿ ಮಹೇಶ್ ಹಲವರು ಇದ್ದರು.