ಅಥಣಿ, ಬೆಳಗಾವಿ: ಮುಂದಿನ ವರ್ಷ ಗೋಟಖಿಂಡಿ ಮಠದ ಮಹಾಂತ ಶಿವಯೋಗಿಗಳ ಲಿಂ. ಸ್ಮರಣೋತ್ಸವದ ಶತಮಾನೋತ್ಸವ ಜರುಗಲಿದ್ದು, ಆ ನಿಟ್ಟಿನಲ್ಲಿ 25 ಸಾವಿರ ಭಕ್ತರಿಗೆ ರುದ್ರಾಕ್ಷಿ ಧಾರಣೆ, 101 ಮನೆಗಳಲ್ಲಿ ಶಿವಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಇಲ್ಲಿನ ಗೋಟಖಿಂಡಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ಮಹಾಂತ ಶಿವಯೋಗಿಗಳ 99ನೇ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕೊಂಡಿಯಾಗಿ ಗೋಟಖಿಂಡಿಮಠ ಮತ್ತು ಮೋಟಗಿಮಠವು ಬೆಳೆಯಲು ಹಿಂದಿನ ಎಲ್ಲ ಮಠಾಧೀಶರ ಕೊಡುಗೆ ಅಪಾರ ಎಂದರು.
ಭಕ್ತರೆ ಶ್ರೀಮಠದ ಆಸ್ತಿಯಾಗಿದ್ದಾರೆ. ಹೀಗಾಗಿ ಮನೆಯಲ್ಲಿ ಮಹಾಮನೆ, ವಚನ ಪಠಣ, ಲಿಂಗಪೂಜೆ, ಯೋಗ, ಧ್ಯಾನ ಹಾಗೂ ಆಧ್ಯಾತ್ಮಿಕ ಚಿಂತನೆ ಜನಜಾಗೃತಿ ಪಾದಯಾತ್ರೆಯನ್ನು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಯೋಜಿಸಲಾಗುವುದು. 16ರಿಂದ ಶಿವಾನುಭವ ಆರಂಭವಾಗಲಿದೆ ಎಂದು ತಿಳಿಸಿದರು.
ಶೇಗುಣಿಸಿ ಡಾ.ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ಪ್ರಕೃತಿಯನ್ನು ನಿಯಂತ್ರಿಸುವಷ್ಟು ಶಕ್ತಿ ಮಹಾತ್ಮರಲ್ಲಿ ಆಧ್ಯಾತ್ಮಿಕವಾಗಿ ಬಂದಿರುತ್ತದೆ. ಅಂತಹ ಮಹಾನ್ ಶಕ್ತಿಯನ್ನು ಗೋಟಖಿಂಡಿಮಠದ ಮಹಾಂತ ಶಿವಯೋಗಿಗಳು ಪಡೆದಿದ್ದರು ಎಂದರು.
ಸಾಧಕ ಮಹನೀಯರನ್ನು ಸತ್ಕರಿಸಲಾಯಿತು. ನದಿ ಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿದರು. ಹಿರಿಯರಾದ ಚನ್ನಮಲ್ಲ ಗೋಟಖಿಂಡಿ, ಸದಾಶಿವ ಬುಟಾಳಿ, ಪ್ರಕಾಶ ಮಹಾಜನ, ಎಂ.ಡಿ.ತೊದಲಬಾಗಿ, ಸುರೇಶ ಗೋಟಖಿಂಡಿ, ಈರನಗೌಡ ಪಾಟೀಲ, ಮಹಾದೇವ ಧರಿಗೌಡ, ಶಿವಯ್ಯ ಧನ್ಯಾಳಮಠ, ಗಿರೀಶ ದಿವಾನಮಳ, ಶ್ರೀಶೈಲ ಹಳ್ಳದಮಳ, ಈರಣ್ಣ ಅಡಗಲ್ಲ, ಗಜಾನನ ಗಸ್ತಿ, ಸುನಿತಾ ಮೆನಸಿ, ವೈಶಾಲಿ ಮಠಪತಿ, ಗಜಾನನ ಗಸ್ತಿ ಇತರರಿದ್ದರು.