ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿಯ ಚಂದನಹಳ್ಳಿ ಗ್ರಾಮದಲ್ಲಿ ಗುರುವಾರ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿ, ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಂಗನವಾಡಿ ಶಿಕ್ಷಕಿ ಪ್ರೇಮಾ(40) ಮೃತರು.
ಚಂದನಹಳ್ಳಿ ಗ್ರಾಮದ ಪ್ರೇಮಾ ಮತ್ತು ಶಾಂತೋಜಿರಾವ್ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪತಿ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ ಹೆಂಡತಿ, ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರೇಮಾ ಎರಡು ವರ್ಷದ ಹಿಂದೆಯೇ ಮನೆ ಬಿಟ್ಟು ಅದೇ ಗ್ರಾಮದ ತಮ್ಮ ತಾಯಿ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.
ಇತ್ತೀಚೆಗೆ ಕೆಲ ದಿನಗಳ ಹಿಂದೆ ಹಬ್ಬದ ನೆಪದಲ್ಲಿ ಪತ್ನಿಯ ಮನೆಗೆ ಬಂದಿದ್ದ ಶಾಂತೋಜಿರಾವ್ ಅಲ್ಲೇ ಉಳಿದುಕೊಂಡಿದ್ದ. ಆದರೆ ಗುರುವಾರ ಬೆಳಗಿನ ಜಾವ, ಮಲಗಿದ್ದ ಮಕ್ಕಳನ್ನು ಒಂದು ಕೊಠಡಿ ಒಳಗೆ ಕೂಡಿಹಾಕಿ. ಬಳಿಕ ಮಲಗಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಅಲ್ಲಿಂದ ಪರಾರಿಯಾಗಿದ್ದಾನೆ. ಮಕ್ಕಳು ಮನೆಯ ಹೆಂಚು ತೆಗೆದು ಜೋರಾಗಿ ಕೂಗಿ ಕೊಂಡಾಗ ಅಕ್ಕಪಕ್ಕದವರು ಬಂದು ಬಾಗಿಲು ತೆರೆದು ನೋಡಿದರೆ ಕೊಲೆಯಾಗಿರುವುದು ತಿಳಿಯಿತು.
ಗ್ರಾಮಸ್ಥರು ಕೂಡಲೇ ಅರೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಪಿಎಸ್‌ಐ ಸುರೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದಾಗ, ಶಾಂತೋಜಿರಾವ್ ಗ್ರಾಮದ ಮಾವಿನ ತೋಪಿನಲ್ಲಿ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಾಗ ಪೊಲೀಸರು ವಶಕ್ಕೆ ಪಡೆದು, ಬೇಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಸ್ಥಳ ಪರಿಶೀಲಿಸಿದರು. ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.