ಕೋಲಾರ: ಮಗುವಿನ ಬೆಳವಣಿಗೆಗೆ ಎದೆಹಾಲು ಶ್ರೇಷ್ಠವಾಗಿದ್ದು, ರೋಗ ನಿರೋಧಕ ಶಕ್ತಿಹೊಂದಿದೆ ತಾಯಿ ಹಾಲು ಸೇವನೆಯಿಂದ ಮಗುವಿನಲ್ಲಿ ಮಾರಕ ಕಾಯಿಲೆಗಳ ನಿಯಂತ್ರಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ತಿಳಿಸಿದರು.
ಭಾರತೀಯ ಮಕ್ಕಳ ವೈದ್ಯರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಸಭಾಂಗಣದಲ್ಲಿ ವಿಶ್ವ ಸ್ತನ್ಯಪಾನ ದಿನಾಚರಣೆಯಲ್ಲಿ ಮಾತನಾಡಿ, ಶಿಶುಗಳಿಗೆ ಕನಿಷ್ಠ ೬ತಿಂಗಳು ತಾಯಿ ಎದೆ ಹಾಲು ಕುಡಿಸುವುದು ಅಗತ್ಯ. ೧ ವರ್ಷದ ನಂತರ ಎರಡು ವರ್ಷದವರೆಗೆ ಎದೆ ಹಾಲಿನ ಜತೆಗೆ ನೈಸರ್ಗಿಕ ಆಹಾರವನ್ನು ಕೊಡುವುದು ಉತ್ತಮ ಎಂದು ತಿಳಿಸಿದರು.
ಕೆಲವು ತಾಯಂದಿರು ತಿಳಿವಳಿಕೆ ಕೊರತೆಯಿಂದ ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸುತ್ತಾರೆ. ಮಕ್ಕಳಿಗೆ ತಾಯಿ ಎದೆಹಾಲಿಗಿಂತ ಶ್ರೇಷ್ಠ ಆಹಾರ ಇನ್ನೊಂದಿಲ್ಲ. ಮಗುವಿಗೆ ಹಾಲು ಕೊಡುವುದರಿಂದ ತಾಯಿಯ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ ಎಂದರು.
ಭಾರತೀಯ ಮಕ್ಕಳ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಬೀರೇಗೌಡ ಮಾತನಾಡಿ, ಎದೆಹಾಲು ಉಣಿಸುವ ತಾಯಿಯ ಜತೆಗೆ ಮಗುವಿನ ಭಾಂದವ್ಯ ಮತ್ತಷ್ಟು ದೃಢವಾಗಿರುತ್ತದೆ. ತಾಯಿಯ ಆರೈಕೆಯಿಂದಾಗಿ ಬೆಳೆದ ಮಗು ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗುತ್ತದೆ ಎಂದರು.
ತಾಯಿ ಎದೆ ಹಾಲಿನ ಮಹತ್ವ ಸಾರುವ ಕಿರು ನಾಟಕವನ್ನು ಇದೇ ಸಂದರ್ಭದಲ್ಲಿ ಕೋಲಾರದ ಚೆನ್ನೇಗೌಡ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ವೈದ್ಯರಾದ ಡಾ.ವಿಜಯಕುಮಾರಿ, ಡಾ.ಆಶಾ, ಡಾ.ಶ್ರೀನಾಥ, ಡಾ.ಶ್ರೀಹರಿ ಮತ್ತಿರರು ಹಾಜರಿದ್ದರು.