ಹಾಸನ: ತಾಯಿ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಕಳ್ಳರು ಆಕೆಯ ವ್ಯಾನಿಟಿ ಬ್ಯಾಗಿನ ಜಿಪ್ ತೆಗೆದು ಅದರೊಳಗೆ 1.30 ಲಕ್ಷ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳೆ ಆಭರಣಗಳನ್ನು ಇರಿಸಿದ್ದ ಪರ್ಸ್ ಕಳ್ಳತನ ಮಾಡಿರುವ ಘಟನೆ ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ.
ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಹೋಬಳಿಯ ಕೆರಗೋಡು ಗ್ರಾಮದ ಸೌಮ್ಯಾ ಅವರು ತನ್ನ ಮಗುವಿನೊಂದಿಗೆ ಆ.26ರಂದು ತಾಯಿ ಮನೆಗೆ ಹೊರಟಿದ್ದರು. ಹೊಳೆನರಸೀಪುರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮಗು ಹಸಿವಿನಿಂದ ಅಳುತ್ತಿದ್ದಾಗ ಸೌಮ್ಯಾ ಅವರು ನಿಲ್ದಾಣದಲ್ಲಿ ಗೋಡೆಯ ಕಡೆಗೆ ತಿರುಗಿ ಮಗುವಿಗೆ ಹಾಲುಣಿಸುವಾಗ ಪಕ್ಕದಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದ ಕಳ್ಳರು ಅದರೊಳಗೆ ಇದ್ದ ಪರ್ಸ್ ಕಳವು ಮಾಡಿದ್ದಾರೆ. ಪರ್ಸ್‌ನಲ್ಲಿದ್ದ ಸುಮಾರು 20 ಗ್ರಾಂ ಚಿನ್ನಾಭರಣ ಹಾಗೂ 30 ಗ್ರಾಂ ಬೆಳ್ಳೆ ಆಭರಣಗಳಿದ್ದವು. ಇವುಗಳ ಅಂದಾಜು ಬೆಲೆ 1.30 ಲಕ್ಷ ರೂ.ಗಳಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಚಿನ್ನಾಭರಣೆ ಹಿಂದಿರುಗಿಸಬೇಕು ಎಂದು ಸೌಮ್ಯಾ ಅವರು ಆ.27ರಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.