ಜಿಲ್ಲೆ

ಮಗುವಿಗೆ ಸಂಸ್ಕಾರ ನೀಡಿದರೆ ಸಮಾಜದ ಏಳ್ಗೆ ಸಾಧ್ಯ

ಜಗಳೂರು: ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಸಂಸ್ಕಾರವನ್ನು ನೀಡಬೇಕು. ಆಗ ಮಾತ್ರ ಮಗು ಸಮಾಜದ ಏಳ್ಗೆಗೆ ಶ್ರಮಿಸುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವ ಸದ್ಭಾವನಾ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳಿಗೆ ಲಕ್ಷಾಂತರ ರೂ. ವ್ಯಯ ಮಾಡಿ ಶಿಕ್ಷಣ ಕೊಡಿಸುತ್ತಾರೆ. ಆದರೆ ಆ ಮಗು ಕೇವಲ ಪುಸ್ತಕದ ಅಂಕಗಳಿಗೆ ಸೀಮಿತವಾಗಿ ಸಂಸ್ಕಾರವನ್ನು ಮರೆಯುತ್ತಿರುವ ಪರಿಣಾಮ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯ ಜೀವನದಲ್ಲಿ ಆಸ್ತಿ, ಅಂತಸ್ತು, ಅಧಿಕಾರದ ಹಿಂದೆ ಬಿದ್ದು ಶಾಂತಿ, ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಇದನ್ನು ಅರಿತವರು ಎಲ್ಲವನ್ನು ತ್ಯಜಿಸಿ ಆಧ್ಯಾತ್ಮಿಕ ಚಿಂತನೆಯುಳ್ಳ ಮಂದಿರಗಳತ್ತ ಮುಖ ಮಾಡುತ್ತಿದ್ದಾರೆ ಎಂದರು.

ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕಿ ಬಿ.ಕೆ. ಭಾರತಿ ಮಾತನಾಡಿ, ಆಧುನಿಕ ಜೀವನದ ಭರಾಟೆಯಲ್ಲಿ ನ್ಯಾಯಾಲಯ, ಆಸ್ಪತ್ರೆ, ಪೊಲೀಸ್ ಠಾಣೆಗಳು ಹೆಚ್ಚಾಗುತ್ತಿವೆ. ಇದರಿಂದ ಮನುಷ್ಯನಿಗೆ ನೆಮ್ಮದಿ, ಸುಖ, ಶಾಂತಿ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾನೆ. ಆಶ್ರಮಗಳಲ್ಲಿ ಪರಮಾತ್ಮನ ಧ್ಯಾನ, ಪ್ರಾರ್ಥನೆ, ಆರಾಧನೆಯ ಮೂಲಕ ಮನಸ್ಸಿಗೆ ನೆಮ್ಮದಿಯನ್ನು ತಂದುಕೊಳ್ಳಬೇಕು ಎಂದು ತಿಳಿಸಿದರು.

ನೂರಾರು ವರ್ಷಗಳ ಹಿಂದೆ ಕೂಲಿ ಮಾಡಿ ಜೀವನ ನಡೆಸಿದರೂ ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. ಆದರೆ ಇಂದು ಹಣವಿದ್ದರೂ ಸಮಾಧಾನವಿಲ್ಲದೆ ಅಲೆಯುವಂಥ ಪರಿಸ್ಥಿತಿ ಇದೆ. ಲೋಕವೆಲ್ಲ ಸಂಪಾದಿಸಿಕೊಂಡು ಆತ್ಮವನ್ನು ನಷ್ಟ ಮಾಡಿಕೊಂಡರೆ ಪ್ರಯೋಜನವೇನು? ಇರುವಷ್ಟು ದಿನ ದೇವರಿಗೆ ಮೆಚ್ಚುಗೆಯಾದ ಕಾರ್ಯಗಳನ್ನು ಮಾಡಬೇಕು ಎಂದರು.

ಇದೇ ವೇಳೆ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತೋರಣಗಲ್ಲು ಬಿ.ಕೆ. ರಾಜೇಶ್ವರಿ, ಹಗರಿ ಬೊಮ್ಮನಹಳ್ಳಿಯ ಬಿ.ಕೆ. ಪೂರ್ಣಿಮಾ, ಹಳ್ಳವಾರದ ಬಿ.ಕೆ. ರಾಜಲಕ್ಷ್ಮೀ, ಬೀರೂರಿನ ಬಿ.ಕೆ. ವಸಂತಾ, ಹರಪನಹಳ್ಳಿಯ ಬಿ.ಕೆ. ಸುಮಂಗಲಾ, ರತ್ನಾ, ಯೋಗಗುರು ಮಂಜುನಾಥ್, ಪ್ರಾಚಾರ್ಯ ಜಗದೀಶ್, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಪ್ರಕಾಶ್ ರೆಡ್ಡಿ, ಸಣ್ಣ ಸೂರಯ್ಯ, ಮಹಮ್ಮದ್ ಗೌಸ್, ಪಲ್ಲಾಗಟ್ಟೆ ಶೇಖರಪ್ಪ, ನಿವೃತ್ತ ಉಪನ್ಯಾಸಕ ರಾಜಪ್ಪ ಸೇರಿ ಮತ್ತಿತರರಿದ್ದರು.