ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಗನಿಗಾಗಿ ಅಂಗಲಾಚುತ್ತಿರುವ 80 ವರ್ಷದ ವೃದ್ಧೆ ಬಸವಣ್ಣೆವ್ವ ಕೋರಿಶೆಟ್ಟಿ. 
ಜಿಲ್ಲೆ

ಮಗನಿಗಾಗಿ ಅಂಗಲಾಚುತ್ತಿರುವ ವೃದ್ಧ ತಾಯಿ

ಬೆಳಗಾವಿ: ಕೊನೆಗಾಲದಲ್ಲಿ ಆಸರೆಯಾಗುತ್ತಾರೆ ಎಂದು ತಂದೆ-ತಾಯಿ ತಮ್ಮ ಮಕ್ಕಳನ್ನು ಏನೆಲ್ಲ ಕಷ್ಟಪಟ್ಟು ಓದಿಸುತ್ತಾರೆ. ಆದರೆ, ಬೆಳೆದ ಮಕ್ಕಳು ಕೊನೆ ಗಾಲದಲ್ಲಿ ತೊರೆದು ಹೋದರೆ ಆ ಹಿರಿಜೀವಗಳು ನರಳು ತ್ತವೆ. ಅಂಥದ್ದೇ ಘಟನೆ ಯೊಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದಲ್ಲಿ ನಡೆದಿದೆ. ತನ್ನ ಮಗನನ್ನು ಹುಡುಕಿಕೊಡುವಂತೆ ವೃದ್ಧ ತಾಯಿ ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದಾಳೆ.

ಖಾನಪೇಟ ಗ್ರಾಮದ ಬಸವಣ್ಣೆವ್ವ ಗುರುಪಾದಪ್ಪ ಕೋರಿಶೆಟ್ಟಿ ಎಂಬ 80 ವರ್ಷದ ವೃದ್ಧೆಗೆ ಇಬ್ಬರು ಪುತ್ರರಿದ್ದರು. ಹಿರಿ ಮಗ ಬಸಪ್ಪ ಕೋರಿಶೆಟ್ಟಿ ಮೃತಪಟ್ಟಿದ್ದಾನೆ. ಕಿರಿಯ ಮಗ ಶಿಂಗಪ್ಪ ಕೋರಿಶೆಟ್ಟಿ ತಾಯಿಯನ್ನು ಊರಲ್ಲೇ ಬಿಟ್ಟು ಹೋದವನು ಮರಳಿ ಬಂದಿಲ್ಲ. ಹಲವು ವರ್ಷಗಳಿಂದ ಅವನನ್ನು ಬೆಂಗಳೂರು ಸೇರಿ ಎಲ್ಲ ಕಡೆ ಹುಡುಕುತ್ತಿದ್ದೇನೆ. ಸಂಬಂಧಿಸಿದ ಎಲ್ಲರಿಗೂ ತಿಳಿಸಿ, ಮಗನನ್ನು ಹುಡುಕಿಕೊಡುವಂತೆ ವಿನಂತಿಸಿದ್ದೇನೆ. ಆದರೆ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ, 15 ದಿನಗಳ ಹಿಂದೆ ಆತ ಊರಿಗೆ ಬಂದು ಹೋಗಿದ್ದು, ಆತ ಬದುಕಿದ್ದಾನೆ ಎಂಬುದು ನನಗೆ ತಿಳಿಯಿತು. ಅವನು ಧಾರವಾಡದಲ್ಲಿದ್ದಾನೆ ಎಂಬ ಮಾಹಿತಿ ಕೂಡ ದೊರೆತಿದೆ. ಹಾಗಾಗಿ, ಜಿಲ್ಲಾಧಿಕಾರಿಗಳು ನನ್ನ ಮಗನನ್ನು ಹುಡುಕಿಕೊಡಲು ಸಹಾಯ ಮಾಡಬೇಕು ಎಂದು ವೃದ್ಧೆ ಮನವಿ ಮಾಡಿದ್ದಾಳೆ.

2 ಎಕರೆ ಹೊಲ ಮಾರಿ ಕಾಲ್ಕಿತ್ತ: 18 ವರ್ಷಗಳ ಹಿಂದೆ ನನ್ನ ಹಿರಿಯ ಮಗನಾದ ಬಸಪ್ಪ ಗುರುಪಾದಪ್ಪ ಕೋರಿಶೆಟ್ಟಿ ನನಗೆ 2 ಎಕರೆ ಜಮೀನು, ಒಂದು ಮನೆ ನೀಡಿದ್ದ. ಆತ ಮೃತಪಟ್ಟ ಬಳಿಕ ಕಿರಿಯ ಮಗ ಶಿಂಗಪ್ಪ ಕೋರಿಶೆಟ್ಟಿ ಜಮೀನು ಮಾರಾಟ ಮಾಡಿ ಹೋದವನು ವಾಪಸ್ ಬಂದಿಲ್ಲ. ಬದುಕುವುದು ಕಷ್ಟವಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇನೆ. ಆದರೆ, ವಯಸ್ಸಾದ ಕಾರಣ ದುಡಿಯಲು ಸಾಧ್ಯವಾಗುತ್ತಿಲ್ಲ. ನೌಕರಿಯಲ್ಲಿರುವ ನನ್ನ ಮಗನನ್ನು ಹುಡುಕಿಕೊಡಿ ಎಂದು ವೃದ್ಧೆ ಬಸವಣ್ಣೆವ್ವ ವಿನಂತಿಸಿದ್ದಾಳೆ. ಹೊಸೂರ ಗ್ರಾಮದ ರಾಯಪ್ಪ ಸಂಗಣ್ಣವರ, ಎಚ್.ಸಂಗೀತಾ ಇತರರಿದ್ದರು.