ಭವಾನಿ(೫೨) ಮಗನಿಂದಲೇ ಬರ್ಭರವಾಗಿ ಹತ್ಯೆಯಾದ ತಾಯಿ 
ಜಿಲ್ಲೆ

ಮಗನಿಂದಲೇ ತಾಯಿಯ ಬರ್ಭರ ಹತ್ಯೆ

ಚಿಕ್ಕಮಗಳೂರು: ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ಹೊಡೆದು ತಾಯಿಯನ್ನು ಮಗನೇ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಭವಾನಿ(೫೨) ಮಗನಿಂದಲೇ ಬರ್ಭರವಾಗಿ ಹತ್ಯೆಯಾದ ತಾಯಿ. ತಾಯಿಯನ್ನು ಕೊಲೆ ಮಾಡಿದ ಪವನ್(೨೮) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬುಧವಾರ ರಾತ್ರಿ ಪವನ್ ಮದ್ಯಪಾನ ಮಾಡಲು ಹಣ ನೀಡುವಂತೆ ತಂದೆ ತಾಯಿಯೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ಮಗ ಹಲ್ಲೆ ನಡೆಸುತ್ತಾನೆ ಎಂದು ತಿಳಿದ ತಂದೆ ಸೋಮೇಗೌಡ ಮನೆಯಿಂದ ಹೊರಹೋಗಿದ್ದಾರೆ. ಈ ವೇಳೆ ಪವನ್ ತಾಯಿಗೆ ಹಣಕ್ಕಾಗಿ ಪೀಡಿಸಲಾರಂಭಿಸಿದ್ದಾನೆ. ಆದರೆ ತಾಯಿ ಹಣ ನೀಡಲು ನಿರಾಕರಿಸಿದಾಗ ಆಕ್ರೋಶಗೊಂಡ ಪವನ್ ಮನೆಯಲ್ಲಿದ್ದ ಕೊಡಲಿಯಿಂದ ತಾಯಿಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮನೆಯ ಒಳಗೇ ತಾಯಿಯ ಮೃತ ದೇಹಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಭವಾನಿಯವರ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಕೈ ಮತ್ತು ಕಾಲುಗಳು ಮಾತ್ರ ಉಳಿದುಕೊಂಡಿದ್ದವು. ಆದರೆ ತಾಯಿಯನ್ನು ಕೊಲೆ ಮಾಡಿದ ಮಗ ಮದ್ಯದ ಅಮಲಿನಲ್ಲಿ ತಾಯಿಯ ಹತ್ಯೆ ಮಾಡಿದ ಪರಿವೆಯೇ ಇಲ್ಲದೆ ತಾಯಿಯನ್ನು ಸುಟ್ಟ ಜಾಗದಲ್ಲಿಯೇ ಪ್ರಜ್ಞೆ ಇಲ್ಲದವನಂತೆ ಮಲಗಿಕೊಂಡಿದ್ದಾನೆ.

ಮಗ ಹೊಡೆಯುತ್ತಾನೆ ಎಂದು ಮನೆಯಿಂದ ಹೋಗಿದ್ದ ತಂದೆ ಕೆಲ ಸಮಯದ ಬಳಿಕ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ತನ್ನ ಪತ್ನಿಯನ್ನು ಕೊಂದು ಮನೆಯ ಒಳಗೇ ಸುಟ್ಟು ಹಾಕಿರುವುದನ್ನು ನೋಡಿ ಭಯಗೊಂಡು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಅಂಗಡಿಗೆ ಹೋಗಿ ವಿಷಯ ತಿಳಿಸಿದ್ದಾರೆ.

ಆಗ ಅಂಗಡಿಯವರ ಸಹಾಯದಿಂದ ಸೋಮೇಗೌಡ ಆಲ್ದೂರು ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಲ್ದೂರು ಠಾಣೆ ಪೊಲೀಸರು ತಾಯಿಯನ್ನು ಹತ್ಯೆ ಮಾಡಿ ಪಕ್ಕದಲ್ಲಿಯೇ ಪ್ರಜ್ಞೆ ಇಲ್ಲದವನಂತೆ ಮಲಗಿದ್ದ ಪವನ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬAಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪವನ್ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಸಂಜೆ ವೇಳೆಗೆ ಮದ್ಯಪಾನ ಮಾಡಿ ನಿರಂತರವಾಗಿ ತಂದೆ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ತಂದೆಗೆ ಲೆದರ್ ಬೆಲ್ಟ್ ನಿಂದ ಬೆನ್ನಿನ ಚರ್ಮ ಕಿತ್ತು ಬರುವಂತೆ ಹೊಡೆದಿದ್ದ. ಆಗ ಸ್ಥಳಿಯರು ಪವನ್ ಗೆ ಬುದ್ಧಿ ಹೇಳಿದರು. ಆದರೆ ತಂದೆ ತಾಯಿ, ಮಗ ಎನ್ನುವ ಕಾರಣಕ್ಕೆ ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ. ಇಷ್ಟು ದಿನ ತಂದೆ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ಮಗ ಇಂದು ತಾಯಿಯನ್ನೇ ಕೊಲೆ ಮಾಡಿರುವುದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.