ನರಗುಂದ: ಸಿಡಿಲು ಬಡಿದು ತಾಯಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು ಅದೃಷ್ಟವಶಾತ್ ಆರು ವರ್ಷದ ಮಗ ಪ್ರಾಣಾಪಾಯದಿಂದ ಪಾರದ ಘಟನೆ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಗ್ರಾಮದ ಗಾಣಿಗೇರ ಓಣಿಯ ಮಾಲಾ ಮಲ್ಲಿಕಾರ್ಜುನ ಕೋನಣ್ಣವರ (31) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಈಕೆಯ ಮಗ ಸಿದ್ದೇಶ ಬದುಕುಳಿದಿದ್ದಾನೆ.
ಮಾಲಾ ಅವರು ಬುಧವಾರ ಬೆಳಗ್ಗೆ ತನ್ನ ತಂದೆ ಹಾಗೂ ಮಗನೊಂದಿಗೆ ಜಮೀನಿಗೆ ತೆರಳಿದ್ದರು. ಹತ್ತಿ ಬೆಳೆಯಲ್ಲಿನ ಕಳೆ ತೆಗೆಯುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಗ ಸಿದ್ದೇಶನಿಗೂ ಸಿಡಿಲು ತಾಗಿದ್ದರಿಂದ ಹಿಂದಿನ ಸಾಲಿನಲ್ಲಿ ಕಳೆ ತೆಗೆಯುತ್ತಿದ್ದ ಮಾಲಾ ತಂದೆ ಶಂಕ್ರಪ್ಪ ಹೊಸಗಾಣಿಗೇರ ಹಾಗೂ ಅಕ್ಕಪಕ್ಕದ ಜಮೀನಿನ ರೈತರು ತಕ್ಷಣವೇ ಆತನನ್ನು ಚಕ್ಕಡಿಯಲ್ಲಿ ಚಿಕ್ಕ ನರಗುಂದದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.