ಜಿಲ್ಲೆ

ಮಗನ ಓದಿಗೆ ನಿವೇಶನ ಮಾರಿದ ತಂದೆ

ಯಾದಗಿರಿ: ವೆಂಕಟೇಶ ನಗರ ದೊಡ್ಡ ತಾಂಡಾದ ನಿವಾಸಿಯೊಬ್ಬರು ನಿವೇಶನ ಮಾರಾಟ ಮಾಡಿ ಮಗನಿಗೆ ಉನ್ನತ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟಿದ್ದು ಸಾರ್ಥಕತೆ ತಂದುಕೊಟ್ಟಿದೆ.

ವಾಚು ರಾಠೋಡ್ ಅವರ ಪುತ್ರ ಮನೋಹರ 2020ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಎಸ್ಸಿ ಮೀಸಲು ಕೋಟಾದಲ್ಲಿ 1491ನೇ ರ್ಯಾಂಕ್ ಪಡೆಯುವ ಮೂಲಕ ಹೆತ್ತವರು, ಕಲಿತ ಕಾಲೇಜು ಹಾಗೂ ಬೋಧಿಸಿದ ಗುರುಗಳಿಗೆ ಕೀರ್ತಿ ತಂದಿದ್ದಾನೆ. ಬಡ ದಂಪತಿ ಟೇಲರ್ ವೃತ್ತಿ ಜತೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಮಗನ ಓದಿಗೆ ಆರ್ಥಿಕವಾಗಿ ತೊಂದರೆ ಆಗದಂತೆ ತಂದೆ ವಾಚು ರಾಠೋಡ್ ತಾಂಡಾದಲ್ಲಿದ್ದ ಒಂದು ನಿವೇಶನವನ್ನು 3.5 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಓದಿನಲ್ಲಿ ಜಾಣನಾಗಿರುವ ಮನೋಹರ ಶಿಕ್ಷಕರ

ಮೆಚ್ಚಿನ ವಿದ್ಯಾರ್ಥಿ ಗೆಳೆಯರೊಂದಿಗೆ ಒಳ್ಳೆಯ ಒಡನಾಟ, ಸಹಕಾರ ಮನೋಭಾವ, ಹೊಸ ವಿಷಯ ಕಲಿಯುವ ಹಂಬಲ ಹೇರಳವಾಗಿತ್ತು ಎಂದು ಶಿಕ್ಷಕಿ ರೇಣುಕಾ ಕುಂಬಾರಳ್ಳಿ ಹೇಳುತ್ತಾರೆ. ಯರಗೋಳ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದು, ಎಸ್ಸೆಸ್ಸೆಲ್ಸಿಯಲ್ಲಿ 608 (ಶೇ.97.28) ಅಂಕ ಪಡೆಯುವ ಮೂಲಕ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಹಾಗೂ ಯಾದಗಿರಿ ತಾಲೂಕಿನ ಟಾಪ್ 10ರಲ್ಲಿ ಒಬ್ಬನಾಗಿ ಹೊರಹೊಮ್ಮಿದ್ದ.

ಕಲಬುರಗಿಯ ಸರ್ವಜ್ಞ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದಿ 550 (ಶೇ.91.66) ಅಂಕ ಪಡೆದಿದ್ದಾನೆ. ಬಳಿಕ ಮುಂಬೈನ ಅಲೈನ್ ಕರಿಯರ್ ಇನ್ಸ್ಟಿಟ್ಯೂಟ್ನಲ್ಲಿ ಕೋಚಿಂಗ್ ಪಡೆದು 2020ರ ಸಾಲಿನ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 1491ನೇ ರ್ಯಾಂಕ್ ಗಳಿಸಿ ಪ್ರತಿಭೆ ಮೆರೆದಿದ್ದಾನೆ. ಈ ಮೂಲಕ ಪಾಲಕರು ಪಟ್ಟ ಕಷ್ಟದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾನೆ.ಚೆನ್ನೈ, ಮುಂಬೈ, ದೆಹಲಿ, ಖರಗ್ಪುರ, ಹೈದರಾಬಾದ್ ಐಐಟಿಗಳಲ್ಲಿ ಇಂಜಿನಿಯರಿಂಗ್ ಸೀಟು ಸಿಗುವ ನಿರೀಕ್ಷೆಯಲ್ಲಿದ್ದು, ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿತು ಒಳ್ಳೆಯ ವ್ಯಕ್ತಿಯಾಗಿ ಬಾಳುವ ಆಸೆ ಇದೆ ಎನ್ನುತ್ತಾನೆ ಮನೋಹರ.