ಜಿಲ್ಲೆ

ಮಕ್ಕಿ ಶಾಸ್ತಾವು ದೇವರ ವಾರ್ಷಿಕೋತ್ಸವ ಸಂಪನ್ನ


ನಾಪೋಕ್ಲು: ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನೆರವೇರಿದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕೋತ್ಸವ ಪ್ರಮುಖ ಕೋಲಗಳೊಂದಿಗೆ ಗುರುವಾರ ಸಂಪನ್ನಗೊಂಡಿತು.


ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬುಧವಾರ ರಾತ್ರಿಯಿಂದಲೇ ವಿವಿಧ ಕೋಲಗಳು ಜರುಗಿದ್ದು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಿದರು.


ಬೆಳಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ಗಮನ ಸೆಳೆದವು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಭಾಗವಹಿಸಿದ್ದರು. ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಅಪರಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿದರು. ಉತ್ಸವದ ಅಂಗವಾಗಿ ಬುಧವಾರ ಮಧ್ಯಾಹ್ನ ಎತ್ತೇರಾಟ ಹಾಗೂ ರಾತ್ರಿ ದೀಪಾರಾಧನೆ ನಡೆಯಿತು. ಈ ಸಂದರ್ಭ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಕಾಣಿಕೆ ಒಪ್ಪಿಸಿದರು.


ದೇವಾಲಯದ ಆಡಳಿತ ಮಂಡಳಿ, ತಕ್ಕಮುಖ್ಯಸ್ಥರು ವಾರ್ಷಿಕ ಉತ್ಸವದ ನೇತೃತ್ವ ವಹಿಸಿಸಿದ್ದು, ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.