ಜಿಲ್ಲೆ

ಮಕ್ಕಳು ಸಂಗೀತದ ಜ್ಞಾನ ಪಡೆಯಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪುಸ್ತಕದಲ್ಲಿನ ಪದ್ಯಗಳು ಮಸ್ತಕದಲ್ಲಿ ಉಳಿಯಬೇಕಿದ್ದರೆ, ಆ ಪದ್ಯಗಳಿಗೆ ಸಂಗೀತ ಸಂಯೋಜನೆ ಅಗತ್ಯ ಎಂದು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ನೆಲದ ನೋವು ಕೃತಿ ಬಿಡುಗಡೆ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಶುಭ ಕಾರ್ಯಗಳಿಂದ ಎಲ್ಲ ಸಂದರ್ಭದಲ್ಲೂ ಬಳಕೆಯಾಗುವ ಸಂಗೀತ ಕೇವಲ ಮನೋರಂಜನೆ ಅಲ್ಲ. ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರಬಲ್ಲದು. ಹೀಗಾಗಿ ಮಕ್ಕಳು ಸಂಗೀತ ಜ್ಞಾನ ಪಡೆಯಬೇಕು. ಅದರಲ್ಲಿ ಪರಿಣತಿ ಹೊಂದಲು ಸಂಗೀತ ಆಲಿಸಬೇಕು. ಮಕ್ಕಳ ಸಂಗೀತ ಆಲಿಕೆಗೆ ಇಂತಹ ಸಂಗೀತೋತ್ಸವ ಸಹಕಾರಿ ಎಂದರು.
ಡಾ. ಶಶಿಧರ ನರೇಂದ್ರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕಾವ್ಯ ಎನ್ನುವುದು ನಮ್ಮಲ್ಲಿ ಸಹಜವಾಗಿ ಹುಟ್ಟಿರಬೇಕು. ನೆಲದ ನೋವಿನ ಸಂಗತಿಗಳು ಸಹಜ ಕವನ ಮೂಲಕ ಅಭಿವ್ಯಕ್ತಗೊಂಡಿವೆ. ಶಬ್ದಗಳ ಬಳಕೆ ಪುನರಪಿಯಾಗದಂತೆ ಕಾವ್ಯ ರಚನೆಗೊಂಡಲ್ಲಿ ಕಾವ್ಯದ ಘನತೆ ಹೆಚ್ಚುತ್ತದೆ ಎಂದರು.
ಡಾ. ಬಸವರಾಜ ಕಲೆಗಾರ ಕೃತಿ ಪರಿಚಯಿಸಿದರು. ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಏರ್ಪಡಿಸಿದ್ದ ಸಂಗೀತೋತ್ಸವದಲ್ಲಿ ಸಿದ್ದಲಿಂಗೇಶ ಕಣವಿ, ಡಾ. ಸುನಂದಾ ಸಾಲವಾಡಗಿ, ಶಕುಂತಲಾ ಹಾದಿಮನಿ, ಅನ್ನಪೂರ್ಣ ಇಂಗಳಗಿ ವಚನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಆಕಾಶವಾಣಿ ನಿಲಯ ಕಲಾವಿದ ಪಂ. ಸಾತಲಿಂಗಪ್ಪ ಕಲ್ಲೂರದೇಸಾಯಿ, ಕೃತಿ ಲೇಖಕ ಸಿದ್ದಣ್ಣ ಪೂಜಾರಿ, ಗಿರೀಶ ದೊಡಮನಿ, ಇತರರು ಇದ್ದರು.
ಡಾ. ಎ.ಎಲ್.ದೇಸಾಯಿ ನಿರೂಪಿಸಿದರು. ಸುರೇಶ ಮಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುಬಸವ ಮಹಾಮನೆ ವಂದಿಸಿದರು.