ಜಿಲ್ಲೆ

ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರ ಕಲಿಯಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರಿಯಾದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಎಂದಿಗೂ ಎಡುವುದಿಲ್ಲ. ಸರಿಯಾದ ಸಂಸ್ಕೃತಿ ಪಡೆದವರು ಕೆಡುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಂಸ್ಕಾರಗಳನ್ನು ಜತೆ ಜತೆಗೆ ಕಲಿತು ಬೆಳೆಯಬೇಕು ಎಂದು ಉಪನಗರ ಪೊಲೀಸ್ ಸ್ಟೇಷನ್ ಪಿಐ ಶಂಕರಗೌಡ ಬಸನಗೌಡ್ರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಭಿಯೋಗ, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಮಾದಕ ವಸ್ತುಗಳೆಂಬ ರಾಕ್ಷಸರಿಂದ ಮಕ್ಕಳನ್ನು, ಯುವ ಜನಾಂಗ ರಕ್ಷಿಸಿ ಮತ್ತು ನಮ್ಮ ಮಕ್ಕಳ ರಕ್ಷಣೆ ನಮ್ಮ ಜವಾಬ್ದಾರಿ ವಿಶೇಷ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅರಿವಿಲ್ಲದೆ ಅಥವಾ ಸ್ನೇಹಿತರ ಒತ್ತಾಯಕ್ಕೆ ಮಣಿದು ಮಾದಕ ವಸ್ತುಗಳ ಸೇವನೆ, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ. ಅಂತಹ ವಿದ್ಯಾರ್ಥಿಗಳ ಜಾಗೃತಿಗೆ ಇಂತಹ ಕಾರ್ಯಕ್ರಮ ನೆರವಾಗಲಿವೆ. ಪ್ರಪಂಚದಲ್ಲಿ ಜನಿಸಿದ ಪ್ರತಿ ಜೀವಿಯೂ ಹೋರಾಟದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಲು ಚಟಗಳ ದಾಸರಾಗದೇ ಉತ್ತಮ ಹವ್ಯಾಸಗಳೊಂದಿಗೆ ಬದುಕು ರೂಪಿಸಿಕೊಳ್ಳಬೇಕು ಎಂದರು.
ಸುವರ್ಣಾ ಸುರಕೋಡ ಮಾತನಾಡಿ, ನಮ್ಮ ಸಮಾಜದಲ್ಲಿ ಒಳ್ಳೆ ಮತ್ತು ಹಾನಿಕಾರಕ ಎರಡೂ ಸಂಗತಿಗಳಿವೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದರಂತೆ ಬದುಕು ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ತಾವು ವಾಸಿಸುತ್ತಿರುವ ಪ್ರದೇಶ, ರಾಜ್ಯ ಮತ್ತು ದೇಶದ ಕಾನೂನು ಪಾಲಿಸಬೇಕು ಎಂದರು.
ಶಶಿ ಸಾಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಶಾಂತರಾಜ ವಿಭೂತಿ, ಮಹೇಶ ಬಿ., ಆನಂದ ಗೊಣ್ಣಾಗರ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ನೀಲಮ್ಮಾ ಕೋಟಿ ಸ್ವಾಗತಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಭುವನೇಶ್ವರಿ ದಾನಪ್ಪಗೌಡರ ವಂದಿಸಿದರು.