ಔರಾದ್: ಮಕ್ಕಳು ಶಿಕ್ಷಣ ಜತೆಗೆ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ಗುರು ಹಿರಿಯನ್ನು ಗೌರವಿಸಬೇಕು. ದೇಶಭಕ್ತಿ ಭಾವನೆ ಬೆಳೆಯಬೇಕು. ಆಟ-ಪಾಠ, ಕಲೆ ಮತ್ತು ಸಾಂಸ್ಕೃತಿಕ ಚಟವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಶಾಸಕರ ಜನ್ಮದಿನದ ನಿಮಿತ್ತ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಔರಾದ್ ಮತ್ತು ಕಮಲನಗರ ತಾಲೂಕಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಾಲೆಯ ಮುಖ್ಯಗುರುಗಳಿಗೆ ಪಟ್ಟಣದಲ್ಲಿ ಶುಕ್ರವಾರ ಪ್ರಭು ಎಂಟರ್‌ಪ್ರೈಸೆಸ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಿರಂತರ ಪ್ರಯತ್ನಿಸುತ್ತಿದ್ದು, ವಿದ್ಯಾರ್ಥಿಗಳ ಮನೋಬಲ ವೃದ್ಧಿಸಿ ಸರಿಯಾಗಿ ಅಭ್ಯಾಸ ಮಾಡುವಂತೆ ಪ್ರೇರಣೆ ನೀಡಲು, ಫಲಿತಾಂಶ ಸುಧಾರಿಸಲು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ ಎಂದರು.
ಗ್ರಾಮ ಸಂಚಾರ ನಡೆಸಿ ಎಲ್ಲ ಕಡೆಗಳಲ್ಲಿ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಅಧಿಕಾರಿಗಳು ಮತ್ತು ಶಿಕ್ಷಕರ ಜತೆಗೆ ನಿರಂತರ ಸಭೆಗಳನ್ನು ನಡೆಸಿ ಶಿಕ್ಷಣದ ಪ್ರಗತಿಗೆ ಯೋಜನಾಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಇದೆಲ್ಲದರ ಪ್ರತಿಫಲ ಕಾಣಿಸುತ್ತಿದೆ. ಹಿಂದೆ ಕೇವಲ ಶೇ.೪೫ರಷ್ಟಿದ್ದ ಫಲಿತಾಂಶ ಸಾಕಷ್ಟು ಸುಧಾರಿಸಿದೆ ಎಂದು ತಿಳಿಸಿದರು.
ಪಾಲಕರು ಬಹಳಷ್ಟು ಕಷ್ಟಪಟ್ಟು ತಮ್ಮ ಮಕ್ಕಳಿಗೆ ಶಾಲೆ-ಕಾಲೇಜುಗಳಿಗೆ ಕಳುಹಿಸುತ್ತಾರೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳು ದೊಡ್ಡ ಗುರಿಯನ್ನಿಟ್ಟುಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ವೈದ್ಯ, ಇಂಜಿನಿಯರ್, ಐಎಎಸ್, ಐಪಿಎಸ್‌ನಂಥ ಹುದ್ದೆಗಳನ್ನು ಗಿಟ್ಟಿಸಿಕೊಂಡು ತಾಲೂಕಿನ ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಚವ್ಹಾಣ್ ಅವರು ನಿರಂತರ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿಯ ಕುರಿತಂತೆ ಅವರ ಚಿಂತನೆಗಳು ಉದ್ದಾತವಾಗಿವೆ ಎಂದು ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಕಸಾಪ ತಾಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿದರು. ಶ್ರೀಶಿವಾನಂದ ಶಿವಾಚಾರ್ಯ, ತಹಸೀಲ್ದಾರ್‌ರಾದ ಮಹೇಶ ಪಾಟೀಲ್, ಅಮಿತ ಕುಲಕರ್ಣಿ, ತಾಪಂ ಇಒ ಪ್ರಕಾಶ ಸೂರ್ಯವಂಶಿ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಬಿಇಒ ಪ್ರಕಾಶ ರಾಠೋಡ್, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಪ್ರತೀಕ್ ಚವ್ಹಾಣ್, ಕಿರಣ ಪಾಟೀಲ್, ಸಚಿನ್ ರಾಠೋಡ್, ಶಿವರಾಜ ಅಲ್ಮಾಜೆ, ಪ್ರವೀಣ ಕಾರಬಾರಿ, ರಾಮ ನರೋಟೆ, ಗುರುನಾಥ ರಾಜಗೀರಾ, ಕೇರಬಾ ಪವಾರ್, ಯಾದವರಾವ ಸಗರ, ಸಂದೀಪ್ ಪಾಟೀಲ್, ಬಸವರಾಜ ಹಳ್ಳೆ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪಂಢರಿ ಆಡೆ, ವಿಶ್ವನಾಥ ಬೋರಾಳೆ, ಸಂಜು ಮೇತ್ರೆ, ಬಸವರಾಜ ಪಾಟೀಲ್ ಇತರರಿದ್ದರು. ಮಲ್ಲಿಕಾರ್ಜುನ ಟಂಕಸಾಲೆ, ರೋಹಿದಾಸ ಮೇತ್ರೆ ನಿರೂಪಣೆ ಮಾಡಿದರು. ಓಂಪ್ರಕಾಶ ದಡ್ಡೆ ಸ್ವಾಗತಿಸಿದರು.
ಸಾಧಕರಿಗೆ ನಗದು ಬಹುಮಾನ: ಸಾಧಕ ವಿದ್ಯಾರ್ಥಿಗಳಿಗೆ ಶಾಸಕ ಪ್ರಭು ಚವ್ಹಾಣ್ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸುಧಾರಾಣಿ ಶರಣಪ್ಪಗೆ ೨೧ ಸಾವಿರ ರೂ., ಕೀರ್ತನಾ ಅನೀಲಕುಮಾರ ೧೧ ಸಾವಿರ ರೂ. ಹಾಗೂ ಆರತಿ ಶಿವರಾಜಗೆ ೭ ಸಾವಿರ ರೂ.. ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಆದರ್ಶ ಹಾಗೂ ಸಿಂಚನಾ ನಮೋಶಿಗೆ ತಲಾ ೨೧ ಸಾವಿರ ರೂ., ಎರಡನೇ ಸ್ಥಾನ ಪಡೆದ ಪ್ರಣವ್‌ಗೆ ೧೧ ಸಾವಿರ ರೂ. ಹಾಗೂ ತೃತಿಯ ಸ್ಥಾನ ಪಡೆದ ನಿವೇದಿತಾ ಹಾಗೂ ಆದಿತ್ಯಗೆ ೭ ಸಾವಿರ ರೂ. ನಗದು ಬಹುಮಾನ, ಉಡುಗೊರೆಯೊಂದಿಗೆ ಗೌರವಿಸಲಾಯಿತು. ಅಲ್ಲದೆ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಔರಾದ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕಾಗಿ ಶಾಸಕ ಚವ್ಹಾಣ್ ಮಾಡುತ್ತಿರುವ ಸೇವೆ ಮಾದರಿಯಾಗಿದೆ. ರಾಜಕೀಯದಲ್ಲಿದ್ದರೂ ದುಷ್ಚಟಗಳಿಲ್ಲದೆ ರೂಢಿಸಿಕೊಂಡಿರುವ ಸರಳ ಜೀವನಶೈಲಿ ಧಾರ್ಮಿಕ ಗುರುಗಳನ್ನು ಹೋಲುತ್ತದೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು