ಮುಂಡಗೋಡ: ಸಮಾಜದಲ್ಲಿ ಮಕ್ಕಳು ವಿದ್ಯೆ, ಉತ್ತಮ ಗುಣಗಳನ್ನು ಕಲಿತು ಇತರರಿಗೆ ಮಾದರಿಯಾಗಬೇಕು ಎಂದು ಕೃಷ್ಣಾಪುರದ ಬಂಜಾರ ಗುರುಪೀಠದ ಕುಮಾರ ಮಹಾರಾಜರು ಹೇಳಿದರು.
ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂತ ಸೇವಾಲಾಲರ 282ನೇ ಜಿಲ್ಲಾ ಮಟ್ಟದ ಜಯಂತ್ಯುತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಸೇವಾಲಾಲರು ಬಂಜಾರ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮನುಷ್ಯನಿಗೆ ಸಂಸ್ಕಾರ ದೊರೆತರೆ ಆತ ತಾನಾಗಿಯೇ ವಿದ್ಯಾವಂತನಾಗುತ್ತಾನೆ. ಧಾರ್ವಿುಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಮುಂದುವರಿಯುತ್ತಾನೆ. ಬಂಜಾರ ಸಮಾಜದವರು ಈಗ ಆರ್ಥಿಕವಾಗಿ ಬಹಳ ಮುಂದುವರಿದಿದ್ದಾರೆ. ಇನ್ನು 2-3 ವರ್ಷಗಳಲ್ಲಿ ಸಮಾಜ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ, ಬಂಜಾರ ಸಮಾಜದ ಋಣ ನನ್ನ ಮೇಲಿದೆ. ತಾಲೂಕಿನ ತೇಗಿನಕೊಪ್ಪದಲ್ಲಿ 70 ಲಕ್ಷ ರೂ. ಅನುದಾನದಲ್ಲಿ ಬಂಜಾರ ಸಮಾಜದ ಸಭಾಭವನದ ಕಟ್ಟಡ ಪೂಜೆಯನ್ನು ಮುಖಂಡರ ಜತೆಗೆ ನೆರವೇರಿಸಿದ್ದೇನೆ. 5 ಕೋಟಿ ರೂ. ಅನುದಾನದಲ್ಲಿ ಜಿಲ್ಲಾ ಮಟ್ಟದ ಸಭಾಭವನವನ್ನು ತಾಲೂಕಿನಲ್ಲಿ ಕಟ್ಟಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಎಲ್.ಟಿ. ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಎಫ್.ಡಿ. ಗುಲ್ಯಾನವರ, ರಾಮಣ್ಣ ಲಮಾಣಿ, ಶೇಖರ ಲಮಾಣಿ, ಪ್ರದೀಪ ಚವ್ಹಾಣ, ಸುನೀಲ ಲಮಾಣಿ, ಮನೋಹರ ಲಮಾಣಿ, ನಾರಾಯಣ ಲಮಾಣಿ, ಬಂಜಾರ ಸಮಾಜದ ಮುಖಂಡರು ಇದ್ದರು. ವೀಣಾ ರಾಠೋಡ, ಡಿ.ಟಿ. ಲಮಾಣಿ, ರಮೇಶ ಪವಾರ ನಿರ್ವಹಿಸಿದರು.