ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಮಾನಸಿಕವಾಗಿ ಸದೃಢರಾಗಲು ಸಂಗೀತ, ನೃತ್ಯದ ಅವಶ್ಯಕತೆ ಇದೆ. ನಿರಂತರ ಓದು, ಮೋಬೈಲ್‌ನಿಂದ ಮಕ್ಕಳು ತಮ್ಮ ಬೆಳವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸದೆ ಕುಂಠಿತಗೊಳ್ಳುತ್ತಿದ್ದು, ಪಾಲಕರು ಮಕ್ಕಳ ಬೆಳವಣಿಗೆಗೆ ಸೃಜನಾತ್ಮಕ ಕಲಾ ಚಟುವಟಿಕೆಗಳಲ್ಲಿ ಪರಿಪೂರ್ಣ ಭಾಗವಹಿಸುವಂತೆ ಆಸಕ್ತಿ ತೊರಿಸಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ವಿಶ್ವಾಂಬರಿ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀ ಭ್ರಮರಾಂಬಿಕಾ ವೈಭವಂ ನೃತ್ಯ ರೂಪಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ನೃತ್ಯ ಸಂಗೀತ ಕಲಿಸುವುದರ ಮೂಲಕ ಅವರಲ್ಲಿ ನೃತ್ಯ ಹಾಗೂ ಸಂಗೀತಾಸಕ್ತಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಪ್ರತಿ ಕ್ಷೇತ್ರದಲ್ಲಿ ಯಶ್ಸಸ್ಸು ಸಿಗಲಿದೆ ಎಂದರು.
ಶಂಕರ ಹಲಗತ್ತಿ ಮಾತನಾಡಿ, ಮಕ್ಕಳು ಪ್ರತಿಭೆಗೆ ತಕ್ಕಂತೆ ಶಿಕ್ಷಣ ಪಡೆಯುತ್ತಿದ್ದು, ಅದನ್ನು ಸರಿಯಾಗಿ ಉಪಯೋಗಿಸಿ ಉಜ್ವಲ ಭವಿಷ್ಯ ಪಡೆಯಬೇಕಾದುದು ಮಕ್ಕಳ ಕರ್ತವ್ಯ. ಪಾಲಕರು ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಸರಿಯಾದ ಮಾರ್ಗದಲ್ಲಿ ಸಾಗುವಂತೆ ಸಲಹೆ ನೀಡಬೇಕು ಎಂದರು.
ಉದ್ಯಮಿ ಮಹೇಶ ಶೆಟ್ಟಿ ಮಾತನಾಡಿದರು. ವಿಶ್ವಾಂಬರಿ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವಿನುತಾ ರಾವ್, ಅನಂತಕೃಷ್ಣರಾವ್, ಅರ್ಪಿತಾ ರಾವ್, ಇತರರು ಇದ್ದರು. ಬಳಿಕ ಮೈಸೂರಿನ ಡಾ. ವಸಂತ ಭಾರದ್ವಾಜ್ ರಚಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಆಧಾರಿತ ಶ್ರೀ ಭ್ರಮರಾಂಬಿಕಾ ವೈಭವಂ ನೃತ್ಯ ರೂಪಕ ಪ್ರದರ್ಶನಗೊಂಡಿತು. ಪವಿತ್ರಾ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಕಿತಾ ರಾವ್ ವಂದಿಸಿದರು.