ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಡಾ. ಕೆ.ಒ.ನರಸಿಂಹಮೂರ್ತಿ, ಡಾ. ಚಂದ್ರಪ್ರಭಾ, ಸುಪ್ರೀತಾ, ದೀಪ್ತಿ, ಡೈಸಿ, ಪೂರ್ಣಾವತಿ, ಚೈತ್ರಾ ಇತರರಿದ್ದರು. 
ಜಿಲ್ಲೆ

ಮಕ್ಕಳು, ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಿ

ಎನ್.ಆರ್.ಪುರ: ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದ ಮೂಲಕ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಒತ್ತು ನೀಡಿ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಕೆ.ಒ.ನರಸಿಂಹಮೂರ್ತಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸೆ.17ರಿಂದ ಅ.2ರವರೆಗೆ ಅಭಿಯಾನ ನಡೆಯಲಿದ್ದು, ಪ್ರತಿ ದಿನ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಕಾಪಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ತಾಯಿ ಮತ್ತು ಮಗುವಿನ ಆರೋಗ್ಯ, ಚುಚ್ಚುಮದ್ದು ಕಾರ್ಯಕ್ರಮ, ಮಾನಸಿಕ ಆರೋಗ್ಯ, ಪೌಷ್ಟಿಕ ಆಹಾರ ಮುಂತಾದ ಆರೋಗ್ಯ ಕಾರ್ಯಕ್ರಮಗಳನ್ನು ಪ್ರತಿದಿನ ನಡೆಸಿ ಅಸಾಂಕ್ರಮಿಕ ರೋಗಗಳಾದ ಕ್ಯಾನ್ಸರ್, ಮಧುಮೇಹ ಶಿಬಿರಗಳನ್ನು ನಡೆಸಲಾಗುವುದು. ಪ್ರತಿ ಗುರುವಾರದಂದು ಮಗುವಿನ ಆರೋಗ್ಯ ಮತ್ತು ಚುಚ್ಚುಮದ್ದು ಕಾರ್ಯಕ್ರಮ ನಡೆಯಲಿದೆ. ಮಗುವಿನ ಒಂದು ಸಾವಿರ ದಿನಗಳು ಹಾಗೂ ವಿವಿಧ ರೋಗಗಳನ್ನು ತಡೆಗಟ್ಟಲು ಲಸಿಕೆಯನ್ನು ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಸೂತಿ ತಜ್ಞೆ ಡಾ. ಚಂದ್ರಪ್ರಭಾ ಅವರು ಮಕ್ಕಳಿಗೆ ಬರುವ ರೋಗಗಳು, ಗರ್ಭಿಣಿ, ಬಾಣಂತಿಯರ ಆರೈಕೆಗಳ ಬಗ್ಗೆ ಪೌಷ್ಟಿಕ ಆಹಾರದ ಕುರಿತು ಮಾಹಿತಿ ನೀಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಪ್ರೀತಾ ಮಕ್ಕಳಿಗೆ ವಿವಿಧ ವಯಸ್ಸಿಗೆ ಅನುಗುಣವಾಗಿ ನೀಡುವ ಲಸಿಕೆಗಳ ಮಾಹಿತಿ ನೀಡಿದರು.

ದೀಪ್ತಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಡೈಸಿ, ಪೂರ್ಣಾವತಿ, ನಮಿತಾ, ಚೈತ್ರಾ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಇದ್ದರು.